ಆ್ಯಷಸ್‌ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಆಸೀಸ್‌ಗೆ ಇಂಗ್ಲೆಂಡ್‌ ತಿರುಗೇಟುಸ್ಪೋಟಕ ಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್ ಓಪನ್ನರ್ ಜಾಕ್ ಕ್ರಾಲಿಎರಡನೇ ದಿನದಂತ್ಯಕ್ಕೆ 67 ರನ್ ಮುನ್ನಡೆ ಪಡೆದ ಆತಿಥೇಯ ಇಂಗ್ಲೆಂಡ್

ಮ್ಯಾಂಚೆಸ್ಟರ್‌(ಜು.21): ‘ಬಾಜ್‌ಬಾಲ್‌’ ಆಟದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಹೊಸ ಆಯಾಮ ನೀಡುತ್ತಿರುವ ಇಂಗ್ಲೆಂಡ್‌ ಮತ್ತೊಮ್ಮೆ ತನ್ನ ಆಕ್ರಮಣಕಾರಿ ಆಟದ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ. ಆ್ಯಷಸ್‌ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾವನ್ನು 317 ರನ್‌ಗೆ ಆಲೌಟ್‌ ಮಾಡಿದ ಇಂಗ್ಲೆಂಡ್‌ ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 384 ರನ್ ಬಾರಿಸಿದ್ದು, ಒಟ್ಟಾರೆ 67 ರನ್‌ಗಳ ಮುನ್ನಡೆ ಸಾಧಿಸಿದೆ.

ಕೇವಲ 9 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ಗೆ ಜ್ಯಾಕ್‌ ಕ್ರಾಲಿ ಹಾಗೂ ಮೋಯಿನ್‌ ಅಲಿ(54) ಚೇತರಿಕೆ ನೀಡಿದರು. ಇವರಿಬ್ಬರು 2ನೇ ವಿಕೆಟ್‌ಗೆ 121 ರನ್‌ ಜೊತೆಯಾಟವಾಡಿದರು. ಸ್ಫೋಟಕ ಆಟವಾಡಿದ ಕ್ರಾಲಿ 93 ಎಸೆತದಲ್ಲಿ ಶತಕ ಸಿಡಿಸಿ, 182 ಎಸೆತದಲ್ಲಿ 21 ಬೌಂಡರಿ, 3 ಸಿಕ್ಸರ್‌ನೊಂದಿಗೆ 189 ರನ್‌ ಚಚ್ಚಿದರು. ಜೋ ರೂಟ್‌ ಜೊತೆ 3ನೇ ವಿಕೆಟ್‌ಗೆ ಕ್ರಾಲಿ 206 ರನ್‌ ಕಲೆಹಾಕಿ ತಂಡಕ್ಕೆ ಮುನ್ನಡೆ ಒದಗಿಸಿದರು. ಕ್ರಾಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಕ್ಯಾಮರೋನ್ ಗ್ರೀನ್ ಯಶಸ್ವಿಯಾದರು.

ವಿಂಡೀಸ್ ಎದುರು ಭರ್ಜರಿ ಆರಂಭ ಪಡೆದ ಟೀಂ ಇಂಡಿಯಾ; ಶತಕದತ್ತ ಕಿಂಗ್ ಕೊಹ್ಲಿ ದಾಪುಗಾಲು..!

ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ಮೂಲಕ ಶತಕದತ್ತ ದಾಪುಗಾಲು ಹಾಕುತ್ತಿದ್ದ ಮಾಜಿ ನಾಯಕ ಜೋ ರೂಟ್ ಬಲಿ ಪಡೆಯುವಲ್ಲಿ ಜೋಶ್ ಹೇಜಲ್‌ವುಡ್ ಯಶಸ್ವಿಯಾದರು. ಜೋ ರೂಟ್, 95 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 84 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 5ನೇ ವಿಕೆಟ್‌ಗೆ ನಾಯಕ ಬೆನ್ ಸ್ಟೋಕ್ಸ್‌(24) ಹಾಗೂ ಹ್ಯಾರಿ ಬ್ರೂಕ್‌(14) ಮುರಿಯದ 33 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

ಮೊದಲ ಟೆಸ್ಟ್‌: ಲಂಕಾವಿರುದ್ಧ ಪಾಕ್‌ಗೆ ಗೆಲುವು!

ಗಾಲೆ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ 4 ವಿಕೆಟ್‌ ಜಯ ಸಾಧಿಸಿ 2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದೆ. 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದ ಪಾಕಿಸ್ತಾನ, ಸರಿಯಾಗಿ 1 ವರ್ಷ ಬಳಿಕ ಟೆಸ್ಟ್‌ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ 2022ರ ಜು.20ರಂದು ಗಾಲೆಯಲ್ಲಿ ಲಂಕಾ ವಿರುದ್ಧವೇ ಗೆಲುವು ಪಡೆದಿತ್ತು. ಆ ನಂತರ ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಸರಣಿಯನ್ನು 0-3ರಲ್ಲಿ ಸೋತರೆ, ನ್ಯೂಜಿಲೆಂಡ್‌ ವಿರುದ್ಧ 2 ಪಂದ್ಯಗಳ ಸರಣಿಯನ್ನು 0-0ಯಲ್ಲಿ ಡ್ರಾ ಮಾಡಿಕೊಂಡಿತ್ತು. ಗೆಲ್ಲಲು 131 ರನ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, 4ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 48 ರನ್‌ ಗಳಿಸಿತ್ತು. ಕೊನೆಯ ದಿನ ಗೆಲ್ಲಲು ಬೇಕಿದ್ದ 83 ರನ್‌ಗಳನ್ನು ಗಳಿಸಿ ಜಯ ತನ್ನದಾಗಿಸಿಕೊಂಡಿತು.

ಭಾರತದಲ್ಲಿ ಮಾತ್ರ ಶುಭ್‌ಮನ್‌ ಗಿಲ್ ಆರ್ಭಟನಾ..?

ಭಾರತ-ಬಾಂಗ್ಲಾ ಸೆಮೀಸ್‌ ಇಂದು

ಕೊಲಂಬೊ: ಗುಂಪು ಹಂತದಲ್ಲಿ ಪ್ರಭಾವಿ ಪ್ರದರ್ಶನ ತೋರಿದ ಭಾರತ ‘ಎ’ ತಂಡ, ಅಂಡರ್‌-23 ಉದಯೋನ್ಮುಖ ಆಟಗಾರರ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಬಾಂಗ್ಲಾದೇಶ ‘ಎ’ ವಿರುದ್ಧ ಸೆಣಸಲಿದೆ. ಈ ವರೆಗೂ ಆಡಿರುವ ಮೂರೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ, ತನ್ನ ಲಯ ಮುಂದುವರಿಸಿ ಫೈನಲ್‌ಗೇರಲು ಎದುರು ನೋಡುತ್ತಿದೆ. ಸಾಯಿ ಸುದರ್ಶನ್‌, ಅಭಿಷೇಕ್‌ ಶರ್ಮಾ, ನಿಕಿನ್‌ ಜೋಸ್‌, ಯಶ್‌ ಧುಳ್‌ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ, ಹರ್ಷಿತ್‌ ರಾಣಾ, ರಾಜವರ್ಧನ್‌ ಹಂಗಾರ್ಗೇಕರ್‌, ನಿಶಾಂತ್‌ ಸಿಂಧು, ಮಾನವ್‌ ಸುತಾರ್‌ ಬೌಲಿಂಗ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಬಾಂಗ್ಲಾದೇಶ ತನ್ನ ಹಿರಿಯ ಆಟಗಾರ ಶೋಮ ಸರ್ಕಾರ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಮತ್ತೊಂದು ಸೆಮೀಸ್‌ನಲ್ಲಿ ಶ್ರೀಲಂಕಾ ‘ಎ’ ಹಾಗೂ ಪಾಕಿಸ್ತಾನ ‘ಎ’ ಮುಖಾಮುಖಿಯಾಗಲಿವೆ.

ಭಾರತ-ಬಾಂಗ್ಲಾ ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಫ್ಯಾನ್‌ ಕೋಡ್‌ ಆ್ಯಪ್‌