ದುಬೈನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಮತ್ತು ಕ್ಷೇತ್ರರಕ್ಷಕರ ಅಮೋಘ ಪ್ರದರ್ಶನದಿಂದ ಪಾಕಿಸ್ತಾನ ತಂಡವನ್ನು 127 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರು.

ದುಬೈ: ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ದಾಳಿ ಹಾಗೂ ಮಿಂಚಿನ ಕ್ಷೇತ್ರರಕ್ಷಣೆಯ ನೆರವಿನಿಂದ ಪಾಕಿಸ್ತಾನ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ನಿಗದಿತ 20 ಓವರ್‌ಗಳಲ್ಲಿ ಪಾಕಿಸ್ತಾನ ತಂಡವು 9 ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿದೆ. ಈ ಮೂಲಕ ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆ ನಿರ್ಧಾರ ತಪ್ಪು ಎನಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಮೊದಲ ಓವರ್‌ನ ಮೊದಲ ಅಧಿಕೃತ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಸೈಮ್ ಆಯುಬ್ ಅವರನ್ನು ಪೆವಿಲಿಯನ್ನಿಗಟ್ಟಿರು. ಇನ್ನು ಎರಡನೇ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಮೊಹಮ್ಮದ್ ಹ್ಯಾರಿಸ್‌ಗೆ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಪಾಕ್ ತಂಡವು 6 ರನ್ ಗಳಿಸುವಷ್ಟರಲ್ಲಿ ಮೊದಲೆರಡು ವಿಕೆಟ್ ಕಳೆದುಕೊಂಡು ಕಂಗಲಾಗಿ ಹೋಯಿತು.

ಇದಾದ ಬಳಿಕ ಮೂರನೇ ವಿಕೆಟ್‌ಗೆ ಶಾಹಿಝಾದ್ ಫರ್ಹಾನ್ ಹಾಗೂ ಫಖರ್ ಜಮಾನ್ 39 ರನ್‌ಗಳ ಜತೆಯಾಟವಾಡುವ ಮೂಲಕ ಪಾಕ್‌ಗೆ ಆಸರೆಯಾದರು. ಆದರೆ ಫಖರ್ ಜಮಾನ್ 17 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಪಾಕ್ ನಾಯಕ ಸಲ್ಮಾನ್ ಅಲಿ ಆಘಾಗೆ ಅಕ್ಷರ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು. ಪಾಕ್ ನಾಯಕ ಕೇವಲ 3 ರನ್ ಗಳಿಸಿ ಪೆವಿಲಿಯನ್‌ಗೆ ವಾಪಾಸ್ಸಾದರು.

ಪಾಕ್ ದಿಢೀರ್ ಕುಸಿತ

ಒಂದು ಹಂತದಲ್ಲಿ 45 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡವು 97 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಕಂಗಲಾಗಿ ಹೋಯಿತು. ಪಾಕ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಕುಲ್ದೀಪ್ ಯಾದವ್ 18 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಇನ್ನು ಜಸ್ಪ್ರೀತ್ ಬುಮ್ರಾ ಎರಡು, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು. ಪಾಕ್ ಪರ ಶಾಹಿಝಾದ್ ಫರ್ಹಾನ್ 44 ಎಸೆತಗಳನ್ನು ಎದುರಿಸಿ 40 ರನ್ ಗಳಿಸುವ ಮೂಲಕ ಅಮೂಲ್ಯ ರನ್ ಕಾಣಿಕೆ ನೀಡಿದರು.

ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಶಾಹೀನ್ ಶಾ ಅಫ್ರಿದಿ ಕೇವಲ 16 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಸಹಿತ ಅಜೇಯ 33 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.