ಏಷ್ಯಾಕಪ್ ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಬಲಿಷ್ಠ ಭಾರತಕ್ಕೆ ಬಾಂಗ್ಲಾದೇಶದ ಬೌಲರ್‌ಗಳಾದ ಮುಸ್ತಾಫಿಜುರ್ ಮತ್ತು ಮೆಹದಿ ಹಸನ್ ಸವಾಲೊಡ್ಡುವ ನಿರೀಕ್ಷೆಯಿದೆ.
ದುಬೈ: ಏಷ್ಯಾಕಪ್ ಸೂಪರ್ -4 ಹಂತದಲ್ಲಿ ಪಾಕಿಸ್ತಾನವನ್ನು ಹೊಸಕಿ ಹಾಕಿದ್ದಲ್ಲದೇ, ಆ ತಂಡ ನಮಗೆ ಪ್ರತಿಸ್ಪರ್ಧಿಯೇ ಅಲ್ಲ ಎನ್ನುವ ಮೂಲಕ ಭಾರತದ ನಾಯಕ ಸೂರ್ಯಕುಮಾರ್ ಯಾದವ್, ಅಷ್ಟಾಗೇನೂ ರೋಚಕತೆ ಮೂಡಿಸದ ಟೂರ್ನಿಗೆ ಹೊಸ ಕಳೆ ತಂದುಕೊಟ್ಟಿದ್ದಾರೆ.
ಸೂರ್ಯರ ಆ ಒಂದು ಹೇಳಿಕೆ, ಈ ಟೂರ್ನಿಯಲ್ಲಿ ಭಾರತಕ್ಕೆ ಸರಿಯಾದ ಪ್ರತಿಸ್ಪರ್ಧಿ ಯಾರು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಬುಧವಾರದ ಸೂಪರ್-4 ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ತೊಡೆ ತಟ್ಟಲು ಬಾಂಗ್ಲಾದೇಶ ಕಾತರಿಸುತ್ತಿದೆ. ಆದರೆ 2024ರಿಂದ ಈ ವರೆಗೂ ಟಿ20ಗಳಲ್ಲಿ 32 ಗೆಲುವು ಸಾಧಿಸಿ ಕೇವಲ 3 ಸೋಲು ಕಂಡಿರುವ ಭಾರತಕ್ಕೆ ಪ್ರತಿಸ್ಪರ್ಧಿಯಾಗಬೇಕಿದ್ದರೆ ಬಾಂಗ್ಲಾ, ಅಸಾಧಾರಣ ಆಟ ಪ್ರದರ್ಶಿಸಬೇಕಿದೆ.
ಭಾರತ ವಿರುದ್ಧ ಆಡಿರುವ 17 ಪಂದ್ಯಗಳಲ್ಲಿ ಬಾಂಗ್ಲಾ ಗೆದ್ದಿರುವುದು ಕೇವಲ ಒಂದರಲ್ಲಿ, ಅದೂ 2019ರಲ್ಲಿ, ಹೀಗಾಗಿ ಸಹಜವಾಗಿಯೇ ಭಾರತವೇ ಈ ಪಂದ್ಯವನ್ನೂ ಗೆಲ್ಲುವ ಫೇವರಿಟ್ ಎನಿಸಿದೆ. ತಂಡ ಗೆದ್ದರೆ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಭಾರತವನ್ನು ಕಟ್ಟಿಹಾಕಬೇಕಿದ್ದರೆ ಬಾಂಗ್ಲಾ ತನ್ನ ಪ್ರಮುಖ ಅಸ್ತ್ರಗಳಾದ ಮುಸ್ತಾಫಿಜುರ್ ರಹಮಾನ್ ಹಾಗೂ ಮೆಹದಿ ಹಸನ್ ಮಿರ್ಜಾರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
ಲಂಕಾ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಒಟ್ಟು 8 ಓವರಲ್ಲಿ 45 ರನ್‌ಗೆ 5 ವಿಕೆಟ್ ಉರುಳಿಸಿದ್ದರು. ದುಬೈನ ನಿಧಾನ ಗತಿಯ ಪಿಚ್‌ನಲ್ಲಿ ಮುಸ್ತಾಫಿಜುರ್ ಡಬಲ್ ಅಪಾಯ ಕಾರಿಯಾಗಬಲ್ಲ ಬೌಲರ್, ಅಲ್ಲದೇ ಐಪಿಎಲ್‌ನಲ್ಲಿ ಭಾರತೀಯರಿಗೆ ಬೌಲ್ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ, ಭಾರತ ತನ್ನ ಎದುರಾಳಿಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
ತಂಡದಲ್ಲಿಲ್ಲ ಬದಲಾವಣೆ?
ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ರನ್ ಗಳಿಸಲು ಕಷ್ಟಪಡುತ್ತಿದ್ದರೂ, ಆ ಜಾಗಕ್ಕೆ ಅವರೇ ಸೂಕ್ತ ಎಂದು ತಂಡದ ಆಡಳಿತ ನಂಬಿದೆ. ಹೀಗಾಗಿ ಜಿತೇಶ್ ಶರ್ಮಾಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಮೂವರು ಸ್ಪಿನ್ನರ್‌ಗಳನ್ನು ಆಡಿಸಲೇಬೇಕಿರುವ ಕಾರಣ, ಭಾರತ ಪರ ಟಿ20ಯಲ್ಲಿ 100 ವಿಕೆಟ್ ಕಿತ್ತಿರುವ ಅರ್ಶದೀಪ್ ಸಿಂಗ್, ಆಡುವ ಹನ್ನೊಂದರಿಂದ ಹೊರಗುಳಿಯಬೇಕಿದೆ. ತಂಡದಲ್ಲಿ ಯಾವುದೇ ಬದಲಾವಣೆ ಆಗುವ ನಿರೀಕ್ಷೆ ಇಲ್ಲ, ಮತ್ತೊಂದೆಡೆ ಬಾಂಗ್ಲಾ ತೋರಿಫುಲ್ ಇಸ್ಲಾಂ ಬದಲು ತಂಜಿಮ್ ಹಸನ್‌ರನ್ನು ಕಣಕ್ಕಿಳಿಸಬಹುದು.
ಸೂಪರ್ 4 ಹಂತದಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡವು ಬಹುತೇಕ ಫೈನಲ್‌ಗೆ ಅಧಿಕೃತವಾಗಿ ಲಗ್ಗೆಯಿಡಲಿವೆ. ಸದ್ಯದ ಟೀಂ ಇಂಡಿಯಾ ಆಟಗಾರರ ಫಾರ್ಮ್ ಗಮನಿಸಿದರೆ ಈ ಪಂದ್ಯ ಕೂಡಾ ಏಕಪಕ್ಷೀಯವಾಗಿ ಸಾಗುವ ಸಾಧ್ಯತೆ ದಟ್ಟವಾಗಿದೆ. ಭಾರತ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಅಸಾಧಾರಣ ಪ್ರದರ್ಶನ ತೋರುತ್ತಿದೆ. ಅದರಲ್ಲೂ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಬಾಂಗ್ಲಾ ಬೌಲರ್‌ಗಳಿಗೆ ದೊಡ್ಡ ಚಾಲೆಂಜ್ ಎದುರಾಗುವ ಸಾಧ್ಯತೆಯಿದೆ.
ಸಂಭವನೀಯ ತಂಡ :
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ .
ಬಾಂಗ್ಲಾ: ಸೈಫ್, ತನ್ಜಿದ್ ಹಸನ್, ಲಿಟನ್ ದಾಸ್ (ನಾಯಕ), ತಹಿದ್, ಶಮೀಮ್, ಜೇಕರ್ ಅಲಿ, ಮೆಹದಿ ಹಸನ್, ನಸುಂ, ಟಸ್ಕಿನ್, ತಂಜಿಮ್, ಮುಸ್ತಾಫಿಜುರ್.
ಪಂದ್ಯ ಆರಂಭ: ರಾತ್ರಿ 8ಕ್ಕೆ,
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್/ಸೋನಿ ಲಿವ್