ಸಂಜು ಸ್ಯಾಮ್ಸನ್ ಅವರ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ತಂಡವು ಒಮಾನ್ ವಿರುದ್ಧ 188 ರನ್ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಒಮಾನ್, ಅಮೀರ್ ಕಲೀಂ ಮತ್ತು ಹಮ್ಮದ್ ಮಿರ್ಜಾ ಅವರ ಅರ್ಧಶತಕಗಳ ಹೊರತಾಗಿಯೂ 21 ರನ್‌ಗಳಿಂದ ಸೋಲನುಭವಿಸಿತು. 

ದುಬೈ: ಸಂಜು ಸ್ಯಾಮ್ಸನ್ ಸಮಯೋಚಿತ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಒಮಾನ್ ಎದುರು ಟೀಂ ಇಂಡಿಯಾ 21 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗ್ರೂಪ್ ಹಂತದಲ್ಲಿ ಸತತ ಮೂರು ಪಂದ್ಯ ಗೆದ್ದು ಅಜೇಯವಾಗಿಯೇ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಇನ್ನು ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಒಮಾನ್ ತಂಡವು ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಗೆಲ್ಲಲು 189 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಒಮಾನ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಪವರ್‌ಪ್ಲೇನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಒಮಾನ್ ಆರಂಭಿಕರಾದ ನಾಯಕ ಜಿತೀಂದರ್ ಸಿಂಗ್ ಹಾಗೂ ಅಮೀರ್ ಕಲೀಂ ಅರ್ಧಶತಕದ ಜತೆಯಾಟವಾಡಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 8.3 ಓವರ್‌ಗಳಲ್ಲಿ 56 ರನ್‌ಗಳ ಜತೆಯಾಟವಾಡಿತು. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಜಿತೀಂದರ್ ಸಿಂಗ್ 33 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 32 ರನ್ ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಒಮಾನ್ ದಿಟ್ಟ ಹೋರಾಟ

ಇನ್ನು ಎರಡನೇ ವಿಕೆಟ್‌ಗೆ ಕಲೀಂ ಹಾಗೂ ಹಮ್ಜದ್ ಮಿರ್ಜಾ ಜೋಡಿ ಸ್ಪೋಟಕ ಜತೆಯಾಟದ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಕೊಂಚ ಆತಂಕ ಮೂಡಿಸಿದರು. ಮೈ ಚಳಿಬಿಟ್ಟು ಬ್ಯಾಟ್ ಬೀಸಿದ ಅಮಿರ್ ಕಲೀಂ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಏಷ್ಯಾಕಪ್ ಟಿ20 ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ 43 ವರ್ಷದ ಕಲೀಂ ಪಾತ್ರರಾದರು. ಈ ಮೊದಲು ಕಳೆದ ಪಂದ್ಯದಲ್ಲಿ ಮೊಹಮ್ಮದ್ ನಬಿ(40 ವರ್ಷ, 260 ದಿನ) ಶ್ರೀಲಂಕಾ ಎದುರು ಅರ್ಧಶತಕ ಸಿಡಿಸುವ ಮೂಲಕ ಏಷ್ಯಾಕಪ್‌ನಲ್ಲಿ ಅರ್ಧಶತಕ ಸಿಡಿಸಿದ ಹಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಆ ದಾಖಲೆ ಇದೀಗ ಪಾಕ್ ಮೂಲದ ಒಮಾನ್ ಆಟಗಾರ ಕಲೀಂ ಪಾಲಾಗಿದೆ.

ಎರಡನೇ ವಿಕೆಟ್‌ಗೆ ಈ ಜೋಡಿ 93 ರನ್‌ಗಳ ಜತೆಯಾಟವಾಡುವ ಮೂಲಕ ಒಮಾನ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಹರ್ಷಿತ್ ರಾಣಾ, ಕಲೀಂ ವಿಕೆಟ್ ಕಬಳಿಸುತ್ತಿದ್ದಂತೆಯೇ ಒಮಾನ್ ಸೋಲಿನತ್ತ ಮುಖ ಮಾಡಿತು. ಕಲೀಂ 46 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 64 ರನ್ ಸಿಡಿಸಿದರು. ಇನ್ನು ಮತ್ತೋರ್ವ ಬ್ಯಾಟರ್ ಹಮ್ಮದ್ ಮಿರ್ಜಾ ಕೇವಲ 33 ಎಸೆತಗಳಲ್ಲಿ 51 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಒಮಾನ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಇದಕ್ಕೂ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಕಳೆದೆರಡು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ್ದ, ಭಾರತ, ಒಮಾನ್ ಎದುರಿನ ಪಂದ್ಯವನ್ನು ಬ್ಯಾಟಿಂಗ್ ಅಭ್ಯಾಸಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದರು. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಉಪನಾಯಕ ಶುಭ್‌ಮನ್ ಗಿಲ್ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಗಿಲ್ 8 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಇದಾದ ಬಳಿಕ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟ್ ಮಾಡಲಿಳಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾದರು. ಅಭಿಷೇಕ್ ಶರ್ಮಾ ಜತೆ ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಕೇವಲ 34 ಎಸೆತಗಳಲ್ಲಿ 66 ರನ್‌ಗಳ ಜತೆಯಾಟವಾಡಿದರು. ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 38 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಹಾರ್ದಿಕ್ ಪಾಂಡ್ಯ ಕೇವಲ ಒಂದು ರನ್‌ ಗಳಿಸಿ ನಾನ್‌ಸ್ಟ್ರೈಕ್ ರನೌಟ್ ಆದರೆ ಶಿವಂ ದುಬೆ ಬ್ಯಾಟಿಂಗ್ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಅಕ್ಷರ್ ಪಟೇಲ್-ಸಂಜು ಸ್ಯಾಮ್ಸನ್ ಜೋಡಿ 4ನೇ ವಿಕೆಟ್‌ಗೆ 45 ಹಾಗೂ ಸಂಜು-ತಿಲಕ್ ವರ್ಮಾ 6ನೇ ವಿಕೆಟ್‌ಗೆ 41 ರನ್ ಜತೆಯಾಟವಾಡುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ಕಾರಣರಾದರು.

ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಅತ್ಯಂತ ಸಮಯೋಚಿತ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ 45 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ ಆಕರ್ಷಕ 56 ರನ್ ಸಿಡಿಸಿ ಆರನೇಯವರಾಗಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತು. ಇಷ್ಟೆಲ್ಲಾ ಆದರೂ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಇಳಿಯದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು.