ಏಷ್ಯಾಕಪ್‌ ರೈಸಿಂಗ್‌ ಸ್ಟಾರ್ಸ್‌ ಟಿ20 ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಶಾಹೀನ್ಸ್‌ ಆಟಗಾರರು ಹಸ್ತಲಾಘವ ನಿರಾಕರಿಸಿದರು. ಈ ಪಂದ್ಯದಲ್ಲಿ, ಪಾಕಿಸ್ತಾನ ಎ ತಂಡವು ಭಾರತ ಎ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

ದೋಹಾ: ಏಷ್ಯಾಕಪ್‌ ರೈಸಿಂಗ್‌ ಸ್ಟಾರ್ಸ್‌ ಟಿ20 ಟೂರ್ನಿಯಲ್ಲಿ ಭಾನುವಾರ ನಡೆದ ಭಾರತ ಎ ಮತ್ತು ಪಾಕಿಸ್ತಾನ ಶಾಹೀನ್ಸ್‌ ನಡುವಿನ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡಲಿಲ್ಲ.

ಮತ್ತೊಮ್ಮೆ ನೋ ಹ್ಯಾಂಡ್‌ಶೇಕ್‌ಗೆ ಸಾಕ್ಷಿಯಾದ ಇಂಡೋ-ಪಾಕ್ ಮ್ಯಾಚ್

ಟಾಸ್‌ ವೇಳೆ ಭಾರತದ ನಾಯಕ ಜಿತೇಶ್‌ ಶರ್ಮಾ ಅವರು ಪಾಕ್‌ನ ನಾಯಕ ಇರ್ಫಾನ್‌ ಖಾನ್‌ಗೆ ಶೇಕ್‌ಹ್ಯಾಂಡ್‌ ಮಾಡದೆ ಪೆವಿಲಿಯನ್‌ ಕಡೆ ತೆರಳಿದರು. ರಾಷ್ಟ್ರಗೀತೆಯ ಬಳಿಕವೂ ಉಭಯ ತಂಡಗಳ ಆಟಗಾರರು ಪರಸ್ಪರ ಮಾತನಾಡದೆ ಪ್ರತ್ಯೇಕವಾಗಿ ನಡೆದರು. ಪಂದ್ಯದ ಸಂದರ್ಭದಲ್ಲೂ 2 ತಂಡಗಳ ಆಟಗಾರರು ಮಾತುಕತೆ ನಡೆಸುವ ಗೋಜಿಗೆ ಹೋಗಲಿಲ್ಲ.

ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ಭಾರತ ಹಿರಿಯರ ತಂಡ ಪಾಕ್‌ ಕ್ರಿಕೆಟಿಗರಿಗೆ ಹಸ್ತಲಾಘವ ನಿರಾಕರಿಸಿತ್ತು. ಅದು ಈಗ ಕಿರಿಯರ ಟೂರ್ನಿಯಲ್ಲೂ ಮುಂದುವರಿದಿದೆ.

ಭಾರತ ಎ ವಿರುದ್ದ ಗೆದ್ದ ಪಾಕಿಸ್ತಾನ ಎ ತಂಡ

ಇನ್ನು ಭಾರತ ಎ ಹಾಗೂ ಪಾಕಿಸ್ತಾನ ಎ ತಂಡಗಳ ನಡುವಿನ ಮಹತ್ವದ ಪಂದ್ಯದಲ್ಲಿ ನೆರೆಯ ಪಾಕಿಸ್ತಾನ ತಂಡವು 8 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 'ಎ' ತಂಡವು ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಆ ಬಳಿಕ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪರಿಣಾಮ ಭಾರತ 'ಎ' ತಂಡವು 19 ಓವರ್‌ಗೆ ಕೇವಲ 136 ರನ್ ಗಳಿಸಿ ಸರ್ವಪತನ ಕಂಡಿತು.

ಭಾರತ 'ಎ' ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಸಿಡಿಸಿದರೆ, ನಮನ್ ಧೀರ್ 35 ರನ್ ಗಳಿಸಿದರು. ಇನ್ಯಾವ ಬ್ಯಾಟರ್‌ಗಳು ಕನಿಷ್ಠ 20 ರನ್ ದಾಖಲಿಸಲು ಸಾಧ್ಯವಾಗಲಿಲ್ಲ.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಮಾಝ್ ಸಾಧಖತ್ ಅವರ ಅಜೇಯ ಅರ್ಧಶತಕ(79)ದ ನೆರವಿನಿಂದ ಪಾಕಿಸ್ತಾನ 'ಎ' ತಂಡವು ಇನ್ನೂ 8 ವಿಕೆಟ್ ಬಾಕಿ ಇರುವಂತೆಯೇ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.