ಏಷ್ಯಾಕಪ್ ಟ್ರೋಫಿಯನ್ನು ಹಸ್ತಾಂತರಿಸುವಂತೆ ಬಿಸಿಸಿಐ ಮಾಡಿದ ಮನವಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ. ನವೆಂಬರ್‌ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಆಟಗಾರನೊಬ್ಬನಿಗೆ ತಾವೇ ಟ್ರೋಫಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಲಾಹೋರ್: ಏಷ್ಯಾಕಪ್ ಟ್ರೋಫಿ ಹಸ್ತಾಂತರಿಸಬೇಕೆಂಬ ಬಿಸಿಸಿಐ ಇ-ಮೇಲ್‌ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಹಾಗೂ ಗೃಹ ಸಚಿವ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ. ಏಷ್ಯಾಕಪ್ ಟ್ರೋಫಿ ನೀಡುವಂತೆ ಈಗಾಗಲೇ ಮೊಹ್ಸಿನ್ ನಖ್ವಿಗೆ ಇ-ಮೇಲ್ ಕಳುಹಿಸಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಉತ್ತರ ಬರದಿದ್ದರೆ ಐಸಿಸಿಯನ್ನು ಅಧಿಕೃತವಾಗಿ ಸಂಪರ್ಕಿಸಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹಿಂದೆ ಇಂಡಿಯಾ ಟುಡೇಗೆ ತಿಳಿಸಿದ್ದರು.
ಮತ್ತದೇ ಪಟ್ಟು ಹಿಡಿದು ಕೂತ ನಖ್ವಿ
ಆದರೆ, ಯಾರಾದ್ರೂ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು, ನವೆಂಬರ್ ಮೊದಲ ವಾರದಲ್ಲಿ ಇದಕ್ಕಾಗಿ ಒಂದು ಕಾರ್ಯಕ್ರಮ ಆಯೋಜಿಸಬಹುದು ಎಂದು ನಖ್ವಿ ಬಿಸಿಸಿಐಗೆ ತಿಳಿಸಿದ್ದಾಗಿ ಪಾಕ್ ಪತ್ರಕರ್ತ ಫೈಜಾನ್ ಲಖಾನಿ ಹೇಳಿದ್ದಾರೆ. ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಬಿಸಿಸಿಐ ಮತ್ತೊಮ್ಮೆ ಟ್ರೋಫಿ ಹಸ್ತಾಂತರಿಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪತ್ರ ಬರೆದಿತ್ತು. ಇದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರು, ನವೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಆಟಗಾರನೊಬ್ಬನ ಕೈಗೆ ಟ್ರೋಫಿ ಹಸ್ತಾಂತರಿಸುವುದಾಗಿ ಉತ್ತರಿಸಿದ್ದಾರೆ ಎಂದು ಲಖಾನಿ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಏಷ್ಯಾಕಪ್ ಟ್ರೋಫಿ ಈಗಲೂ ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಧಾನ ಕಚೇರಿಯಲ್ಲಿದೆ.
ನಖ್ವಿಯಿಂದ ಟ್ರೋಫಿ ಸ್ವೀಕರಿಸೊಲ್ಲವೆಂದ ಭಾರತ
ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ಗೆದ್ದ ನಂತರ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಭಾರತ ತಂಡ ಪಟ್ಟು ಹಿಡಿದಿತ್ತು. ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ನಖ್ವಿ ನೀಡಿದ್ದ ಭಾರತ ವಿರೋಧಿ ಹೇಳಿಕೆಗಳೇ ಇದಕ್ಕೆ ಕಾರಣವಾಗಿತ್ತು. ಬೇರೆ ಯಾರಿಂದಲಾದ್ರೂ ಟ್ರೋಫಿ ಸ್ವೀಕರಿಸುವುದಾಗಿ ಭಾರತ ತಂಡ ತಿಳಿಸಿದರೂ, ನಖ್ವಿ ಟ್ರೋಫಿ ನೀಡದೆ ಕ್ರೀಡಾಂಗಣದಿಂದ ಹೊರನಡೆದಿದ್ದರು. ಏಷ್ಯಾಕಪ್ ಚಾಂಪಿಯನ್ ಭಾರತ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವಂತೆ ಬಿಸಿಸಿಐ ಒತ್ತಾಯಿಸಿದರೂ ನಖ್ವಿ ಒಪ್ಪಿರಲಿಲ್ಲ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಟ್ರೋಫಿ ಹಸ್ತಾಂತರಿಸುವುದಾಗಿ, ಆದರೆ ತಾನೇ ಟ್ರೋಫಿ ನೀಡುವುದಾಗಿ ನಖ್ವಿ ತಿಳಿಸಿದ್ದರು, ಇದನ್ನು ಬಿಸಿಸಿಐ ತಿರಸ್ಕರಿಸಿತ್ತು.
