ಏಷ್ಯಾಕಪ್ ಟೂರ್ನಿಗೆ ಸಜ್ಜಾಗಿರುವ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ಲೇಯಿಂಗ್ 11 ಆಯ್ಕೆ ಕುರಿತು ಮಹತ್ವದ ಸಲಹೆ ನೀಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಮೂವರು ಆಲ್ರೌಂಡರ್‌ಗಳಿದ್ದ ಕಾರಣ ಗೆಲುವು ಸಾಧ್ಯವಾಯಿತು.
ದುಬೈ: ಇಂದಿನಿಂದ 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಹಾಲಿ ಚಾಂಪಿಯನ್ ಭಾರತ ತಂಡವು ಸೆಪ್ಟೆಂಬರ್ 10ರಂದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಯಾವ ಕಾಂಬಿನೇಷನ್‌ನೊಂದಿಗೆ ಕಣಕ್ಕಿಳಿಯಲಿದೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ. ಈ ಕುರಿತಂತೆ ಸೂರ್ಯ ಹಾಗೂ ಹೆಡ್‌ಕೋಚ್ ಗೌತಮ್ ಗಂಭೀರ್ ತಮ್ಮದೇ ಆದ ರಣತಂತ್ರ ಹೆಣೆಯುತ್ತಾ ಬಂದಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯಿಂಗ್ 11 ಆಯ್ಕೆ ಮಾಡುವಾಗ ಈ ತಪ್ಪು ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ 'ಎಕ್ಸ್' ಅಕೌಂಟ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಅಮೂಲ್ಯ ಕಿವಿಮಾತು ಹೇಳಿದ್ದಾರೆ. 'ರೋಹಿತ್ ಶರ್ಮಾ ಭಾರತಕ್ಕೆ ಐಸಿಸಿ ಟಿ20 ವಿಶ್ವಕಪ್ ಗೆದ್ದಾಗ, ಅವರ ಬಳಿ ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರಂತಹ ಮೂವರು ಆಲ್ರೌಂಡರ್‌ಗಳಿದ್ದರು. ಇದರರ್ಥ ಆರುವ ಬೌಲಿಂಗ್ ಆಯ್ಕೆಗಳು ಹಾಗೂ 8ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಆಯ್ಕೆಗಳು ರೋಹಿತ್ ಶರ್ಮಾ ಅವರ ಬಳಿ ಇದ್ದವು. ಈಗ ಭಾರತದ ಬಳಿ ಏಷ್ಯಾಕಪ್ ಟೂರ್ನಿಯಲ್ಲಿ ಕೇವರ ಇಬ್ಬರು ತಜ್ಞ ಅಲ್ರೌಂಡರ್(ಹಾರ್ದಿಕ್ ಪಾಂಡ್ಯ & ಅಕ್ಷರ್ ಪಟೇಲ್) ಇದ್ದಾರೆ. ಹೀಗಾಗಿ ಭಾರತ ತಂಡವು ಹೊಸದಾಗಿ ವಿನ್ನಿಂಗ್ ಕಾಂಬಿನೇಷನ್ ಹುಡುಕಬೇಕಿದೆ. ವಾಷಿಂಗ್ಟನ್ ಸುಂದರ್ ಅವರನ್ನು ಮಿಸ್ ಮಾಡಿಕೊಳ್ತಿದೆ' ಎಂದು ಕೈಫ್ ಬರೆದುಕೊಂಡಿದ್ದಾರೆ.
ಏಷ್ಯಾಕಪ್ ಟೂರ್ನಿಗೆ ಭಾರತದ ವೇಳಾಪಟ್ಟಿ:
ಟೀಂ ಇಂಡಿಯಾ, ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಾದಾಡಲಿದೆ. ಇನ್ನು ಸೆಪ್ಟೆಂಬರ್ 19ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
