ಸೆಪ್ಟೆಂಬರ್ 9 ರಿಂದ 28 ರವರೆಗೆ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಟೂರ್ನಿಯ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ.

ನವದೆಹಲಿ/ಕರಾಚಿ: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಈ ಬಾರಿಯ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಸೆ.9ರಿಂದ 28ರ ವರೆಗೆ ನಡೆಯಲಿದೆ. ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೆ.14ರಂದು ನಿಗದಿಯಾಗಿದೆ.

ಶನಿವಾರ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಟೂರ್ನಿಯ ದಿನಾಂಕ ಘೋಷಿಸಿದರು. ಬಳಿಕ ಅಧಿಕೃತ ವೇಳಾಪಟ್ಟಿಯೂ ಪ್ರಕಟಗೊಂಡಿತು. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ. ಆತಿಥ್ಯ ಹಕ್ಕು ಭಾರತ ಹೊಂದಿದ್ದರೂ ಪಂದ್ಯಗಳು ಯುಎಇ ದೇಶದ ದುಬೈ ಹಾಗೂ ಅಬುಧಾಬಿ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಭಾರತ, ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಈ ಎರಡೂ ತಂಡಗಳು ಟೂರ್ನಿಯಲ್ಲಿ 3 ಬಾರಿ ಮುಖಾಮುಖಿಯಾಗುವ ನಿರೀಕ್ಷೆಯಿದೆ. ಗುಂಪು ಹಂತದ ಬಳಿಕ ಸೂಪರ್‌-4 ಹಂತಕ್ಕೇರಿದರೆ ಅಲ್ಲೂ ಭಾರತ-ಪಾಕ್‌(ಸೆ.21) ಸೆಣಸಲಿದ್ದು, ಬಳಿಕ ಫೈನಲ್‌ನಲ್ಲೂ ಮುಖಾಮುಖಿಯಾಗಬಹುದು. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುವ ಸಾಧ್ಯತೆಯಿದೆ.

‘ಎ’ ಗುಂಪು

ಭಾರತ, ಪಾಕಿಸ್ತಾನ, ಯುಎಇ, ಒಮಾನ್‌

‘ಬಿ’ ಗುಂಪು

ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಕಾಂಗ್‌.

ಭಾರತ ಪಂದ್ಯಗಳ ವೇಳಾಪಟ್ಟಿ

ಎದುರಾಳಿ ದಿನಾಂಕ

ಯುಎಇ ಸೆ.10

ಪಾಕಿಸ್ತಾನ ಸೆ.14

ಹಾಂಕಾಂಗ್‌ ಸೆ.19

ಟೂರ್ನಿ ಮಾದರಿ ಹೇಗೆ?

ಟೂರ್ನಿಯಲ್ಲಿರುವ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡ ಒಮ್ಮೆ ಪರಸ್ಪರ ಆಡಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೂಪರ್‌-4 ಹಂತ ಪ್ರವೇಶಿಸಲಿವೆ. ಸೂಪರ್‌-4ನಲ್ಲಿ ಪ್ರತಿ ತಂಡಕ್ಕೆ 3 ಪಂದ್ಯಗಳಿವೆ. ಅಗ್ರ-2 ತಂಡಗಳು ಫೈನಲ್‌ಗೇರಲಿವೆ.

ಚಿನ್ನಸ್ವಾಮಿಯಲ್ಲಿ ಇನ್ನು ಐಪಿಎಲ್‌ ಪಂದ್ಯಗಳಿಲ್ಲ?

ಬೆಂಗಳೂರು: ಆರ್‌ಸಿಬಿ ಕಪ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತಕ್ಕೆ ಸಾಕ್ಷಿಯಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಐಪಿಎಲ್‌ ಪಂದ್ಯಗಳೇ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಕಾಲ್ತುಳಿತ ಸಂಬಂಧ ನ್ಯಾ.ಮೈಕೆಲ್‌ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ.

ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆ ಹೆಚ್ಚಿನ ಜನರು ಸೇರುವ ಸಮಾರಂಭಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ. ದೊಡ್ಡ ಸಂಖ್ಯೆಯ ಜನರು ಸೇರಿದರೆ ಅಪಾಯ ಎದುರಾಗಬಹುದು. ಇಂತಹ ಸಮಾರಂಭಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿಯೇ ಇನ್ನು ಪಂದ್ಯಗಳನ್ನು ನಡೆಸಬೇಕು ಎಂದಿದೆ.

ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ್ನು ಐಪಿಎಲ್ ಸೇರಿ ಮಹತ್ವದ ಪಂದ್ಯಗಳ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಈಗಾಗಲೇ ಮಹಾರಾಜ ಟ್ರೋಫಿಯನ್ನು ಪ್ರೇಕ್ಷಕರಿಲ್ಲದೆ ಆಯೋಜಿಸಲು ಕೆಎಸ್‌ಸಿಎ ನಿರ್ಧರಿಸಿದೆ. ಈ ನಡುವೆ ಸೆಪ್ಟೆಂಬರ್‌ನಲ್ಲಿ ಮಹಿಳಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ, ಸೆಮಿಫೈನಲ್‌, ಸಂಭಾವ್ಯ ಫೈನಲ್‌ ಪಂದ್ಯ ನಿಗದಿಯಾಗಿದೆ. ಆದರೆ ವರದಿ ಬಳಿಕ ವಿಶ್ವಕಪ್‌ ಭವಿಷ್ಯ ಅತಂತ್ರವಾಗಿದೆ. ಜೊತೆಗೆ ಭವಿಷ್ಯದಲ್ಲಿ ಐಪಿಎಲ್‌ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.

ಮಹಾರಾಜ ಜೊತೆಗೆ ಇನ್ಮುಂದೆ ಕೆಎಸ್‌ಸಿಎ ಮಹಾರಾಣಿ ಟ್ರೋಫಿ

ಬೆಂಗಳೂರು: ಪುರುಷರಿಗೆ ಮಹಾರಾಜ ಟ್ರೋಫಿ ಟಿ20 ಲೀಗ್‌ ಆಯೋಜಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಇನ್ನು ಮುಂದೆ ಮಹಿಳೆಯರಿಗೆ ಮಹಾರಾಣಿ ಟ್ರೋಫಿ ನಡೆಸಲಿದೆ. ಚೊಚ್ಚಲ ಆವೃತ್ತಿಯ ಟಿ20 ಲೀಗ್‌ಗೆ ಸಿದ್ಧತೆ ಆರಂಭಗೊಂಡಿದ್ದು, ಆ.4ರಿಂದ ಪಂದ್ಯಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಟೂರ್ನಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, 5 ದಿನಗಳ ಕಾಲ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಇದೇ ತಿಂಗಳ ಕೊನೆಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ. ಹುಬ್ಬಳ್ಳಿ ಹೊರತುಪಡಿಸಿ ಮಹಾರಾಜ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಇತರ 5 ತಂಡಗಳು ಮಹಿಳಾ ಲೀಗ್‌ನಲ್ಲೂ ಆಡಲಿವೆ ಎಂದು ಗೊತ್ತಾಗಿದೆ. ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.