Asia Cup 2023: ಬಾಂಗ್ಲಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ತಿಲಕ್ ವರ್ಮಾ ಡೆಬ್ಯೂ
ಕೊಲಂಬೊದಲ್ಲಿ ಭಾರತ ವರ್ಸಸ್ ಬಾಂಗ್ಲಾದೇಶ ಫೈಟ್
ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ
ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ
ಕೊಲಂಬೊ(ಸೆ.15): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ ತಂಡದ ಪರ ತಿಲಕ್ ವರ್ಮಾ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡದ ಪರ ತಂಜೀಮ್ ಹಸನ್ ಏಕದಿನ ಕ್ರಿಕೆಟ್ ಮಾದರಿಗೆ ಪಾದಾರ್ಪಣೆ ಮಾಡಿದ್ದಾರೆ.
ನಿರೀಕ್ಷೆಯಂತೆಯೇ ಭಾರತ ಕ್ರಿಕೆಟ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ್ ಕೃಷ್ಣ ತಂಡ ಕೂಡಿಕೊಂಡಿದ್ದಾರೆ. ರನ್ ಮಷೀನ್ ವಿರಾಟ್ ಕೊಹ್ಲಿ, ವೇಗಿಗಳಾದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ಸ್ಪಿನ್ ಅಸ್ತ್ರ ಕುಲ್ದೀಪ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ.
ಔಪಚಾರಿಕ ಪಂದ್ಯ: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 4 ಹಂತದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಈಗಾಗಲೇ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಬಾಂಗ್ಲಾದೇಶ ತಂಡದ ಎದುರು ಫೈನಲ್‌ಗೂ ಮುನ್ನ ಅಭ್ಯಾಸ ಪಂದ್ಯವನ್ನಾಗಿ ಬಳಸಿಕೊಳ್ಳಲು ಸಜ್ಜಾಗಿದೆ. ಇನ್ನೊಂದೆಡೆ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡವು ಕೂಡಾ ಮೊದಲೆರಡು ಪಂದ್ಯಗಳನ್ನು ಸೋತು ಈಗಾಗಲೇ ಫೈನಲ್ ರೇಸ್‌ನಿಂದ ಹೊರಬಿದ್ದಿದ್ದು, ಕೊನೆಯ ಪಂದ್ಯದಲ್ಲಿ ಗೆದ್ದು ಗೆಲುವಿನೊಂದಿಗೆ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಲು ಎದುರು ನೋಡುತ್ತಿದೆ.
ಒಟ್ಟು ಮುಖಾಮುಖಿ: 39
ಭಾರತ: 31
ಬಾಂಗ್ಲಾ: 07
ಫಲಿತಾಂಶವಿಲ್ಲ: 01
ತಂಡಗಳು ಹೀಗಿವೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್, ಇಶಾನ್ ಕಿಶನ್ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.
ಬಾಂಗ್ಲಾದೇಶ: ತಾನ್ದೀಜ್ ಹಸನ್, ಲಿಟನ್ ದಾಸ್, ಅನ್ಮೋಲ್ ಹಕ್, ಶಕೀಬ್ ಅಲ್ ಹಸನ್(ನಾಯಕ), ಶಮೀಮ್ ಹೊಸೈನ್, ಮೆಹದಿ ಹಸನ್ ಮಿರಜ್, ಮೆಹದಿ ಹಸನ್, ತಾನ್ಜಿಮ್ ಹಸನ್ ಶಕೀಬ್, ಮುಸ್ತಾಫಿಜುರ್ ರೆಹಮಾನ.
ಪಂದ್ಯ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್