ಏಷ್ಯಾಕಪ್ ಟೂರ್ನಿಯಲ್ಲಿಂದು ಎರಡನೇ ಪಂದ್ಯತವರಿನಲ್ಲಿ ಶ್ರೀಲಂಕಾ ಎದುರು ಬಾಂಗ್ಲಾದೇಶ ಸವಾಲುಶುಭಾರಂಭದ ನಿರೀಕ್ಷೆಯಲ್ಲಿ ಉಭಯ ತಂಡಗಳು

ಪಲ್ಲಕೆಲೆ(ಆ.31): ತವರಿನಲ್ಲಿ ನಡೆಯಲಿರುವ ಏಷ್ಯಾಕಪ್‌ ಏಕದಿನ ಟೂರ್ನಿಗೂ ಮುನ್ನ ಗಾಯಾಳುಗಳ ಸಮಸ್ಯೆಗೆ ತುತ್ತಾಗಿ, 2 ದಿನಗಳ ಹಿಂದಷ್ಟೇ ತಂಡ ಪ್ರಕಟಿಸಿದ ಶ್ರೀಲಂಕಾ ಗುರುವಾರ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಲಂಕಾ, ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಶುಭಾರಂಭ ಮಾಡಲು ಎದುರು ನೋಡುತ್ತಿದೆ.

ನಾಯಕ ದಸುನ್‌ ಶಾನಕ ಸೇರಿ ತಂಡಕ್ಕೆ ಯುವ ಹಾಗೂ ಅನುಭವಿ ಬ್ಯಾಟರ್‌ಗಳ ಬಲವಿದೆ. ಪಥುಂ ನಿಸ್ಸಾಂಕ 2023ರಲ್ಲಿ 687 ರನ್‌ ಕಲೆಹಾಕಿದ್ದು, ದಿಮುತ್‌ ಕರುಣರತ್ನೆ(481 ರನ್‌) ಹಾಗೂ ಚರಿತ್‌ ಅಸಲಂಕ(341 ರನ್‌) ಸಹ ಉತ್ತಮ ಲಯದಲ್ಲಿದ್ದಾರೆ. ಯುವ ಬೌಲರ್‌ಗಳಾದ ಮಥೀಶ ಪತಿರನ, ಮಹೀಶ್‌ ತೀಕ್ಷಣ, ಕಸುನ್‌ ರಜಿತ ಮೇಲೆ ನಿರೀಕ್ಷೆ ಇದೆ.

Asia Cup 2023: ಉದ್ಘಾಟನಾ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದ ಪಾಕಿಸ್ತಾನ!

ಇನ್ನು ಬಾಂಗ್ಲಾದೇಶಕ್ಕೂ ಗಾಯಾಳುಗಳ ಸಮಸ್ಯೆ ಕಾಡುತ್ತಿದ್ದು ಅನುಭವಿ ಬ್ಯಾಟರ್‌ ತಮೀಮ್‌ ಇಕ್ಬಾಲ್‌, ವೇಗಿ ಎಬಾದತ್‌ ಹೊಸೇನ್‌, ವಿಕೆಟ್‌ ಕೀಪರ್‌-ಬ್ಯಾಟರ್‌ ಲಿಟ್ಟನ್‌ ದಾಸ್‌ರ ಸೇವೆ ಲಭ್ಯವಿಲ್ಲ. ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡಿರುವ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌-ಹಸನ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಎದುರು ನೋಡುತ್ತಿದ್ದಾರೆ.

'ಬಿ' ಗುಂಪಿನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳ ಜತೆಗೆ ಆಫ್ಘಾನಿಸ್ತಾನ ಕೂಡಾ ಸ್ಥಾನ ಪಡೆದಿದ್ದು, ಸೂಪರ್ 4 ಹಂತಕ್ಕೇರಲು ಮೂರು ತಂಡಗಳ ನಡುವೆ ಸಾಕಷ್ಟು ಪೈಪೋಟಿ ಇದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೂಪರ್ 4 ಹಂತಕ್ಕೆ ಲಗ್ಗೆಯಿಡಲಿವೆ. ಹೀಗಾಗಿ ಗುಂಪು ಹಂತದ 'ಬಿ' ಗುಂಪಿನಲ್ಲಿ ಸಾಕಷ್ಟು ಪೈಪೋಟಿ ನಿರೀಕ್ಷಿಸಲಾಗಿದೆ.

ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪ..! ಏಷ್ಯಾಕಪ್‌ಗೂ ಮುನ್ನ ಎದುರಾಳಿ ಪಡೆಯಲ್ಲಿ ಢವ ಢವ

ಸಂಭಾವ್ಯ ತಂಡಗಳು ಹೀಗಿವೆ ನೋಡಿ:

ಶ್ರೀಲಂಕಾ:
ಫಥುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ,ಧನಂಜಯ ಡಿ ಸಿಲ್ವಾ, ದಶುನ್‌ ಶನಕಾ(ನಾಯಕ), ದಶನ್ ಹೇಮಂತ, ಮಹೀಶ್ ತೀಕ್ಷಣ, ಮಥೀಶ್ ಪತಿರಣ,ಕುಶಾನ್‌ ರಜಿತಾ.

ಬಾಂಗ್ಲಾದೇಶ:
ತಂಝೀದ್ ತಮಿಮ್‌, ನಯೀಂ ಶೇಖ್, ನಜ್ಮುಲ್‌ ಹೊಸೈನ್, ತೌಹಿದ್‌ ರಿದೈ, ಶಕೀಬ್ ಅಲ್ ಹಸನ್(ನಾಯಕ), ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೆಹದಿ ಹೆಸನ್‌, ಟಸ್ಕಿನ್ ಅಹಮ್ಮದ್, ಹಸನ್ ಮೊಹಮೂದ್, ಮುಸ್ತಾಫಿಜುರ್ ರೆಹಮಾನ್/ಶೌರಿಫುಲ್ ಇಸ್ಲಾಂ.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌