Asia Cup 2023: ಲಂಕಾ ಮಾರಕ ದಾಳಿಗೆ ಬಾಂಗ್ಲಾದೇಶ ಧೂಳೀಪಟ..!

‍‍ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಶ್ರೀಲಂಕಾ ಕ್ರಿಕೆಟ್ ತಂಡ
ಏಕದಿನದಲ್ಲಿ ಲಂಕಾಕ್ಕಿದು ಸತತ 11ನೇ ಜಯ
ಸೂಪರ್‌-4 ಹಂತಕ್ಕೇರಲು ಒಂದು ಹೆಜ್ಜೆ ಮುಂದಿಟ್ಟ ಲಂಕಾ

Asia Cup 2023 Sri Lanka hammer Bangladesh by 5 wickets kvn

ಪಲ್ಲಕೆಲೆ(ಸೆ.01): ಏಷ್ಯಾಕಪ್‌ ಏಕದಿನ ಟೂರ್ನಿಯಲ್ಲಿ ಶ್ರೀಲಂಕಾ ಶುಭಾರಂಭ ಮಾಡಿದೆ. ‘ಗ್ರೂಪ್‌ ಆಫ್‌ ಡೆತ್‌’ ಎಂದೇ ಕರೆಸಿಕೊಳ್ಳುತ್ತಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಲಂಕಾ, ಸೂಪರ್‌-4 ಹಂತಕ್ಕೇರಲು ಒಂದು ಹೆಜ್ಜೆ ಮುಂದಿಟ್ಟಿದೆ. ಇದೇ ಗುಂಪಿನಲ್ಲಿ ಅಫ್ಘಾನಿಸ್ತಾನ ಸಹ ಇರುವ ಕಾರಣ, ಅನಿರೀಕ್ಷಿತ ಫಲಿತಾಂಶ ಹೊರಬೀಳಬಹುದು. ಈ ಸೋಲು ಬಾಂಗ್ಲಾದೇಶವನ್ನು ಗುಂಪು ಹಂತದಲ್ಲೇ ಹೊರಹಾಕಿದರೂ ಅಚ್ಚರಿಯಿಲ್ಲ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾ, ಲಂಕಾದ ಅನನುಭವಿ ಬೌಲಿಂಗ್‌ ಪಡೆಯ ಎದುರು ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆದರೆ ಐಪಿಎಲ್‌ ಸೇರಿ ಕೆಲ ಪ್ರಮುಖ ಅಂತಾರಾಷ್ಟ್ರೀಯ ಟಿ20 ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಮಥೀಶ ಪತಿರನ, ಮಹೀಶ್‌ ತೀಕ್ಷಣ, ದಸುನ್‌ ಶಾನಕ ಸೇರಿ ಲಂಕಾದ ಎಲ್ಲಾ ಬೌಲರ್‌ಗಳು ಅತ್ಯುತ್ತಮ ದಾಳಿ ಸಂಘಟಿಸಿದ ಪರಿಣಾಮ, ಬಾಂಗ್ಲಾ 42.4 ಓವರಲ್ಲಿ 164 ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿ ಬೆನ್ನತ್ತಿದ ಲಂಕಾ, ಸದೀರಾ ಸಮರವಿಕ್ರಮ ಹಾಗೂ ಚರಿತ್‌ ಅಸಲಂಕ ಅವರ ಅರ್ಧಶತಕಗಳ ನೆರವಿನಿಂದ 39 ಓವರಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ನೇಪಾಳ ಕ್ರಿಕೆಟಿಗರು ಪಡೆಯುವ ಸಂಬಳ ಕೇಳಿದ್ರೆ ನಿಮಗೂ ಅಚ್ಚರಿಯಾಗೋದು ಗ್ಯಾರಂಟಿ..!

43 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಲಂಕಾಕ್ಕೆ ಸದೀರಾ ಹಾಗೂ ಅಸಲಂಕ ಆಸರೆಯಾದರು. ಇವರಿಬ್ಬರು 4ನೇ ವಿಕೆಟ್‌ಗೆ 78 ರನ್‌ ಸೇರಿಸಿ ತಂಡವನ್ನು ಜಯದ ಹೊಸ್ತಿಲಿಗೆ ತಲುಪಿಸಿದರು. ಸದೀರಾ 54 ರನ್‌ ಗಳಿಸಿ ಔಟಾದ ಬಳಿಕ ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನೂ ಸಂಪೂರ್ಣವಾಗಿ ವಹಿಸಿಕೊಂಡ ಅಸಲಂಕ, 92 ಎಸೆತದಲ್ಲಿ 62 ರನ್‌ ಗಳಿಸಿ ಔಟಾಗದೆ ಉಳಿದರು. ನಾಯಕ ಶಾನಕ 14 ರನ್‌ ಕೊಡುಗೆ ನೀಡಿದರು.

ದಿಢೀರ್‌ ಕುಸಿತ: ಆರಂಭಿಕ ಆಘಾತದ ಹೊರತಾಗಿಯೂ ಬಾಂಗ್ಲಾ ನಜ್ಮುಲ್‌ ಶಾಂಟೋ ಹಾಗೂ ತೌಹಿದ್‌ ಹೃದೋಯ್‌ರ ಜೊತೆಯಾಟದಿಂದ ಚೇತರಿಕೆ ಕಂಡಿತ್ತು. 3 ವಿಕೆಟ್‌ಗೆ 95 ರನ್‌ ಗಳಿಸಿದ್ದ ಬಾಂಗ್ಲಾ, ದಿಢೀರ್‌ ಕುಸಿತ ಕಂಡಿತು. 69 ರನ್‌ಗೆ ಕೊನೆಯ 7 ವಿಕೆಟ್‌ ಕಳೆದುಕೊಂಡಿತು. ಏಕಾಂಗಿ ಹೋರಾಟ ಪ್ರದರ್ಶಿಸಿದ ಶಾಂಟೋ 122 ಎಸೆತದಲ್ಲಿ 89 ರನ್‌ ಗಳಿಸಿದರು. ಪತಿರನ 4 ವಿಕೆಟ್‌ ಕಿತ್ತರೆ, ತೀಕ್ಷಣ 2 ಪ್ರಮುಖ ವಿಕೆಟ್‌ ಕಬಳಿಸಿದರು.

ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಫಿಕ್ಸ್​..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

ಸ್ಕೋರ್‌:

ಬಾಂಗ್ಲಾ 42.4 ಓವರಲ್ಲಿ 164/10 (ನಜ್ಮುಲ್‌ 89, ತೌಹಿದ್‌ 20, ಪತಿರನ 4-32, ತೀಕ್ಷಣ 2-19)

ಲಂಕಾ 39 ಓವರಲ್ಲಿ 165/5 (ಅಸಲಂಕ 62*, ಸದೀರಾ 54, ಶಕೀಬ್‌ 2-29)

ಪಂದ್ಯಶ್ರೇಷ್ಠ: ಮಥೀಶ ಪತಿರನ

ಟರ್ನಿಂಗ್‌ ಪಾಯಿಂಟ್‌

ಸಣ್ಣ ಮೊತ್ತ ಬೆನ್ನತ್ತಲು ಇಳಿದ ಲಂಕಾ 43 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ಆದರೆ 4ನೇ ವಿಕೆಟ್‌ಗೆ 78 ರನ್‌ ಸೇರಿಸಿದ ಸದೀರಾ ಹಾಗೂ ಅಸಲಂಕ ಪಂದ್ಯ ಲಂಕಾ ಕೈಜಾರದಂತೆ ನೋಡಿಕೊಂಡರು.

11 ಜಯ: ಏಕದಿನದಲ್ಲಿ ಲಂಕಾಕ್ಕಿದು ಸತತ 11ನೇ ಜಯ. ತಂಡ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದೆ.

ಲಂಕಾ ವಿಶ್ವದಾಖಲೆ!

ಬಾಂಗ್ಲಾವನ್ನು ಆಲೌಟ್‌ ಮಾಡಿದ ಶ್ರೀಲಂಕಾ, ಸತತ 11 ಪಂದ್ಯಗಳಲ್ಲಿ ಎದುರಾಳಿಯ ಎಲ್ಲಾ 10 ವಿಕೆಟ್‌ ಕಬಳಿಸಿತು. ಈ ಮೂಲಕ ವಿಶ್ವ ದಾಖಲೆ ಬರೆಯಿತು. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸತತ 10 ಪಂದ್ಯಗಳಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಿದ್ದವು. ಆ ದಾಖಲೆಯನ್ನು ಲಂಕಾ ಮುರಿದಿದೆ.

Latest Videos
Follow Us:
Download App:
  • android
  • ios