Asianet Suvarna News Asianet Suvarna News

Mohammed Siraj: ಮೊದಲ 3 ಓವರ್‌ನಲ್ಲೇ 5 ವಿಕೆಟ್ ಗೊಂಚಲು ಪಡೆದ ಆರ್‌ಸಿಬಿ ವೇಗಿ! ಸಿರಾಜ್ ದಾಳಿಗೆ, ಲಂಕಾ ಚೆಲ್ಲಾಪಿಲ್ಲಿ

ಸಿರಾಜ್ ತಾವೆಸೆದ ಮೂರನೇ ಹಾಗೂ ಇನಿಂಗ್ಸ್‌ನ 6ನೇ ಓವರ್‌ನ 4ನೇ ಎಸೆತದಲ್ಲಿ ಶ್ರೀಲಂಕಾದ ನಾಯಕ ದಶುನ್ ಶಾನಕ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕೇವಲ 15 ಎಸೆತಗಳ ಅಂತರದಲ್ಲಿ 5 ವಿಕೆಟ್ ಗೊಂಚಲು ತಮ್ಮದಾಗಿಸಿಕೊಳ್ಳುವಲ್ಲಿ ಸಿರಾಜ್ ಯಶಸ್ವಿಯಾದರು.

Asia Cup 2023 Mohammed Siraj takes 5 Sri Lanka top order blown away kvn
Author
First Published Sep 17, 2023, 4:45 PM IST

ಕೊಲಂಬೊ(ಸೆ.17): 16ನೇ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್, ಲಂಕಾ ಬ್ಯಾಟರ್‌ಗಳು ಕಂಗಾಲಾಗುವಂತ ಮಾರಕ ದಾಳಿ ನಡೆಸಿ ಮಿಂಚಿದ್ದಾರೆ. ಮೊದಲ ಮೂರು ಓವರ್‌ನಲ್ಲೇ ಸಿರಾಜ್, ಲಂಕಾದ 5 ವಿಕೆಟ್ ಕಬಳಿಸುವ ಮೂಲಕ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದಿದ್ದಾರೆ. ಮೊದಲ 6 ಓವರ್ ಅಂತ್ಯದ ವೇಳೆಗೆ ಶ್ರೀಲಂಕಾ ತಂಡವು ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ತಂಡಕ್ಕೆ ಆರಂಭದಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಬುಮ್ರಾ, ಲಂಕಾ ಆರಂಭಿಕ ಬ್ಯಾಟರ್ ಕುಸಾಲ್ ಪೆರೆರಾರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ತೋರಿಸಿದರು.

Asia Cup 2023: ಮೊಹಮ್ಮದ್ ಸಿರಾಜ್ ಬಿರುಗಾಳಿ, ಒಂದೇ ಓವರ್‌ನಲ್ಲಿ 4 ವಿಕೆಟ್ ಪತನ..!

ಸಿರಾಜ್ ಬಿರುಗಾಳಿ, ಲಂಕಾ ಬ್ಯಾಟರ್ ಚೆಲ್ಲಾಪಿಲ್ಲಿ: ಶಿಸ್ತುಬದ್ದ ದಾಳಿ ನಡೆಸಿದ ವೇಗಿ ಮೊಹಮ್ಮದ್ ಸಿರಾಜ್, ಮೊದಲ ಓವರ್‌ನಲ್ಲಿ ಯಾವುದೇ ರನ್ ಬಿಟ್ಟು ಕೊಡದೇ ಮೇಡನ್ ಓವರ್ ಮಾಡಿದರು. ಇದಾದ ಬಳಿಕ ತಾವೆಸೆದ ಎರಡನೇ ಓವರ್‌ನಲ್ಲೇ ಲಂಕಾದ ನಾಲ್ಕು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಇನಿಂಗ್ಸ್‌ 4ನೇ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಸಿರಾಜ್, ಪಥುಮ್ ನಿಸ್ಸಾಂಕಗೆ ಪೆವಿಲಿಯನ್ ಹಾದಿ ತೋರಿಸಿದರು. ಎರಡನೇ ಎಸೆತವನ್ನು ಸಮರವಿಕ್ರಮ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಇನ್ನು ಮೂರನೇ ಎಸೆತದಲ್ಲಿ ಸಿರಾಜ್‌, ಸಮರವಿಕ್ರಮರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಮರು ಎಸೆತದಲ್ಲಿ ಅಸಲಂಕಾ, ಇಶಾನ್ ಕಿಶನ್‌ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇನ್ನು 5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಧನಂಜಯ ಡಿ ಸಿಲ್ವಾ, ಆರನೇ ಎಸೆತದಲ್ಲಿ ಕೆ ಎಲ್‌ ರಾಹುಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಪೆರೇಡ್ ನಡೆಸಿದರು. 

Asia Cup Final: ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ, ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

ಇನ್ನು ಸಿರಾಜ್ ತಾವೆಸೆದ ಮೂರನೇ ಹಾಗೂ ಇನಿಂಗ್ಸ್‌ನ 6ನೇ ಓವರ್‌ನ 4ನೇ ಎಸೆತದಲ್ಲಿ ಶ್ರೀಲಂಕಾದ ನಾಯಕ ದಶುನ್ ಶಾನಕ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕೇವಲ 15 ಎಸೆತಗಳ ಅಂತರದಲ್ಲಿ 5 ವಿಕೆಟ್ ಗೊಂಚಲು ತಮ್ಮದಾಗಿಸಿಕೊಳ್ಳುವಲ್ಲಿ ಸಿರಾಜ್ ಯಶಸ್ವಿಯಾದರು. 
 

Follow Us:
Download App:
  • android
  • ios