Asia Cup Final: ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ, ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ
ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿ
ಹೈವೋಲ್ಟೇಜ್ ಪಂದ್ಯಕ್ಕೆ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯ
ಉಭಯ ತಂಡಗಳಲ್ಲಿ ಮಹತ್ವದ ಬದಲಾವಣೆ
ಕೊಲಂಬೊ(ಸೆ.17): 16ನೇ ಆವೃತ್ತಿಯ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ಹಾಗೂ ಬಲಿಷ್ಠ ಭಾರತ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಶುನ್ ಶಾನಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.
ನಿರೀಕ್ಷೆಯಂತೆಯೇ ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಈ ಪೈಕಿ, ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿತ್ತು. ಈ ಪೈಕಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಮಹೀಶ್ ತೀಕ್ಷಣ ಸ್ನಾಯು ಸೆಳೆತಕ್ಕೆ ಒಳಗಾಗಿ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದು, ತೀಕ್ಷಣ ಬದಲಿಗೆ ಹೇಮಂತ್ ತಂಡ ಕೂಡಿಕೊಂಡಿದ್ದಾರೆ.
ಫೈನಲ್ ಪಂದ್ಯಕ್ಕೆ 6 ಬದಲಾವಣೆ: ಭಾರತ ತಂಡದಲ್ಲಿ ಫೈನಲ್ ಪಂದ್ಯಕ್ಕೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಂಡಿದ್ದಾರೆ. ಶಮಿ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ ಕೃಷ್ಣ ಮತ್ತು ತಿಲಕ್ ವರ್ಮಾ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ವಾಷಿಂಗ್ಟನ್ ತಂಡಕ್ಕೆ: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್‌ಗೆ ಗಾಯವಾಗಿದ್ದು, ಹೀಗಾಗಿ ಬೆಂಗಳೂರಲ್ಲಿದ್ದ ವಾಷಿಂಗ್ಟನ್ ಸುಂದರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪಂದ್ಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಡೆಯಲಿರುವ ಕಾರಣ, ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಲಭಿಸಿದೆ.
Asia Cup ಫೈನಲ್‌ಗೆ ಮಳೆ ಅಡ್ಡಿ ಮಾಡುತ್ತಾ? ಹವಾಮಾನ ವರದಿ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಏಷ್ಯಾಕಪ್‌ನಲ್ಲಿ ಈವರೆಗೆ ಟೀಂ ಇಂಡಿಯಾ ಹೆಚ್ಚಿನ ಯಶಸ್ಸು ಸಾಧಿಸಿದ್ದು, 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅತ್ತ ಟೂರ್ನಿಯಲ್ಲಿ ಭಾರತದ ಪ್ರಬಲ ಎದುರಾಳಿಯಾಗಿರುವ ಶ್ರೀಲಂಕಾ 6 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಆದರೆ ಕಳೆದ 5 ವರ್ಷಗಳಲ್ಲಿ ಐಸಿಸಿ ಜೊತೆ ಏಷ್ಯಾಕಪ್ ಪ್ರಶಸ್ತಿಗೂ ಬರ ಎದುರಿಸುತ್ತಿರುವ ಭಾರತ ಈ ಬಾರಿ ಅದನ್ನು ನೀಗಿಸಲು ಎದುರು ನೋಡುತ್ತಿದೆ. ಹಾಲಿ ಚಾಂಪಿಯನ್ ಲಂಕಾ ತವರಿನಲ್ಲಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ನಾಳೆ ಮೀಸಲು ದಿನ
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್ ಆಟವೂ ಸಾಧ್ಯವಾಗದೆ ಇದ್ದರೆ ಆಗ ಸೋಮವಾರ ಪಂದ್ಯ ಮುಂದುವರಿಯಲಿದೆ.
ಬಿಟ್ಟುಕೊಡೋ ಮಾತೇ ಇಲ್ಲ; ಗೊತ್ತಿರಲಿ, ನಾಯಕನಾಗಿ ರೋಹಿತ್ ಶರ್ಮಾ ಇದುವರೆಗೂ ಸೋತಿದ್ದು ಕೇವಲ ಒಂದು ಫೈನಲ್ ಮಾತ್ರ...!
ತಂಡದ ಆಟಗಾರರ ವಿವರ ಹೀಗಿದೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.
ಶ್ರೀಲಂಕಾ: ಪೆರೇರಾ, ನಿಸ್ಸಾಂಕ, ಮೆಂಡಿಸ್, ಸಮರವಿಕ್ರಮ, ಅಸಲಂಕ, ಧನಂಜಯ, ಶಾನಕ(ನಾಯಕ), ವೆಲ್ಲಲಗೆ, ಹೇಮಂತ, ರಜಿತ, ಪತಿರನ.
ಪಂದ್ಯ: ಮಧ್ಯಾಹ್ನ 3ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್