ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿಒಂದೇ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡ ಶ್ರೀಲಂಕಾ

ಕೊಲಂಬೊ(ಸೆ.17): ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸಿ ಶ್ರೀಲಂಕಾ ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಶ್ರೀಲಂಕಾಗೆ ವೇಗಿ ಮೊಹಮ್ಮದ್ ಸಿರಾಜ್ ಆರಂಭಿಕ ಶಾಕ್ ನೀಡಿದ್ದು, ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿದ್ದಾರೆ. 4 ಓವರ್ ಅಂತ್ಯದ ವೇಳೆಗೆ ಲಂಕಾ ತಂಡವು 12 ರನ್‌ಗೆ 5 ವಿಕೆಟ್ ಕಳೆದುಕೊಂಡಿದೆ.

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಶುನ್ ಶಾನಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಟಾಸ್ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪಂದ್ಯಕ್ಕೆ ಕೆಲಕಾಲ ಮಳೆರಾಯ ಅಡ್ಡಿಪಡಿಸಿದ. ಮೊದಲ ಓವರ್‌ನಲ್ಲೇ ಟೀಂ ಇಂಡಿಯಾ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಕುಸಾಲ್ ಪೆರೆರಾ ಅವರನ್ನು ಶೂನ್ಯಕ್ಕೆ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮರು ಓವರ್‌ನಲ್ಲಿ ವೇಗಿ ಸಿರಾಜ್ ಮೇಡನ್ ಓವರ್ ಮಾಡಿದರು. ಇನ್ನು ಮೂರನೇ ಓವರ್‌ನಲ್ಲಿ ಬುಮ್ರಾ ಕೇವಲ ಒಂದು ರನ್ ನೀಡಿದರು.

Asia Cup ಫೈನಲ್‌ಗೆ ಮಳೆ ಅಡ್ಡಿ ಮಾಡುತ್ತಾ? ಹವಾಮಾನ ವರದಿ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬೆಂಕಿಯುಂಡೆಯಂತೆ ದಾಳಿ ನಡೆಸಿದ ಸಿರಾಜ್: 4ನೇ ಓವರ್‌ನ ಮೊದಲ ಎಸೆತದಲ್ಲೇ ಸಿರಾಜ್, ಪಥುಮ್ ನಿಸ್ಸಾಂಕಗೆ ಪೆವಿಲಿಯನ್ ಹಾದಿ ತೋರಿಸಿದರು. ಎರಡನೇ ಎಸೆತವನ್ನು ಸಮರವಿಕ್ರಮ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಇನ್ನು ಮೂರನೇ ಎಸೆತದಲ್ಲಿ ಸಿರಾಜ್‌, ಸಮರವಿಕ್ರಮರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಮರು ಎಸೆತದಲ್ಲಿ ಅಸಲಂಕಾ, ಇಶಾನ್ ಕಿಶನ್‌ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇನ್ನು 5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಧನಂಜಯ ಡಿ ಸಿಲ್ವಾ, ಆರನೇ ಎಸೆತದಲ್ಲಿ ಕೆ ಎಲ್‌ ರಾಹುಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಪೆರೇಡ್ ನಡೆಸಿದರು.

ಹೀಗಿತ್ತು ನೋಡಿ ಬೆಂಕಿ ಓವರ್:

Scroll to load tweet…

ತಂಡದ ಆಟಗಾರರ ವಿವರ ಹೀಗಿದೆ ನೋಡಿ:

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆ ಎಲ್ ರಾಹುಲ್‌, ಇಶಾನ್‌ ಕಿಶನ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್.

ಶ್ರೀಲಂಕಾ: ಪೆರೇರಾ, ನಿಸ್ಸಾಂಕ, ಮೆಂಡಿಸ್‌, ಸಮರವಿಕ್ರಮ, ಅಸಲಂಕ, ಧನಂಜಯ, ಶಾನಕ(ನಾಯಕ), ವೆಲ್ಲಲಗೆ, ಹೇಮಂತ, ರಜಿತ, ಪತಿರನ.

ಪಂದ್ಯ: ಮಧ್ಯಾಹ್ನ 3ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌