2023ರ ಏಷ್ಯಾಕಪ್ ಟೂರ್ನಿಯು ಆಗಸ್ಟ್ 30ರಿಂದ ಆರಂಭಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಸಭೆ ನವದೆಹಲಿಯಲ್ಲಿ ನಡೆಯಲಿದೆಕೆ.ಎಲ್‌.ರಾಹುಲ್‌ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ

ನವದೆಹಲಿ(ಆ.19): ಆಗಸ್ಟ್ 30ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್‌ ಏಕದಿನ ಟೂರ್ನಿಗೆ ಭಾರತ ತಂಡವನ್ನು ಆಗಸ್ಟ್ 21ರಂದು ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಸಭೆ ನವದೆಹಲಿಯಲ್ಲಿ ನಡೆಯಲಿದ್ದು, ನಾಯಕ ರೋಹಿತ್‌ ಶರ್ಮಾ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

ಕೆ.ಎಲ್‌.ರಾಹುಲ್‌ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಶ್ರೇಯಸ್ ಅಯ್ಯರ್‌ ಸಹ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 15 ಸದಸ್ಯರ ತಂಡ ಆಯ್ಕೆ ಮಾಡಲಿರುವ ಆಯ್ಕೆಗಾರರು, ಹೆಚ್ಚುವರಿ ಬ್ಯಾಟರ್‌ ಅಥವಾ ಸ್ಪಿನ್ನರ್‌ನ ಅವಶ್ಯಕತೆ ಬಗ್ಗೆ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.

ಏಷ್ಯಾಕಪ್ ತಂಡದ ಆಯ್ಕೆಗೂ ಮುನ್ನ ದ್ರಾವಿಡ್ - ಜಯ್ ಶಾ 2 ಗಂಟೆಗಳ ಸುದೀರ್ಘ ಮೀಟಿಂಗ್..!

ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು 50 ಓವರ್‌ಗಳ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯದ ಹಕ್ಕು ಪಡೆದುಕೊಂಡಿದೆ. ಆದರೆ ಭಾರತ ಕ್ರಿಕೆಟ್ ತಂಡವು, ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ ಕಾರಣ, ಹೈಬ್ರೀಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ. ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆದರೆ, ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿವೆ. 

ಟೂರ್ನಿ ಮಾದರಿ ಹೇಗೆ?

6 ತಂಡಗಳನ್ನು ತಲಾ 3 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ನೇಪಾಳ ‘ಎ’ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ಇನ್ನುಳಿದ 2 ತಂಡದ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಸೂಪರ್‌-4 ಹಂತಕ್ಕೇರಲಿವೆ. ಸೂಪರ್‌-4ನಲ್ಲಿ ಪ್ರತಿ ತಂಡ ಇನ್ನುಳಿದ 3 ತಂಡದ ವಿರುದ್ಧ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.

ಭಾರತ-ಪಾಕಿಸ್ತಾನ ಏಷ್ಯಾಕಪ್ ಟಿಕೆಟ್ ಖರೀದಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬೆಂಗ್ಳೂರಿಗೆ ಸತತ 4ನೇ ಸೋಲು!

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಸತತ 4ನೇ ಸೋಲು ಕಂಡಿದೆ. ಮಯಾಂಕ್‌ ಅಗರ್‌ವಾಲ್‌ ನೇತೃತ್ವದ ತಂಡ ಶುಕ್ರವಾರ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ 23 ರನ್‌ಗಳಿಂದ ಸೋಲನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಮಂಗಳೂರು 3 ವಿಕೆಟ್‌ಗೆ 194 ರನ್‌ ಕಲೆಹಾಕಿತು. ಕೆ.ವಿ. ಸಿದ್ಧಾರ್ಥ್‌ 64 ಎಸೆತಗಳಲ್ಲಿ ಔಟಾಗದೆ 100 ರನ್‌ ಸಿಡಿಸಿದರೆ, ಶಿವಕುಮಾರ್‌ 40, ಅನಿರುದ್ಧ ಜೋಶಿ ಔಟಾಗದೆ 31(18 ಎಸೆತ) ರನ್‌ ಕೊಡುಗೆ ನೀಡಿದರು. ಬೃಹತ್‌ ಗುರಿ ಬೆನ್ನತ್ತಿದ ಬೆಂಗಳೂರು 8 ವಿಕೆಟ್‌ಗೆ 171 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಿಶ್ಚಲ್‌(61), ಶುಭಾಂಗ್‌ ಹೆಗ್ಡೆ(45), ಸೂರಜ್‌ ಅಹಿಜಾ(32) ಹೋರಾಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಆದಿತ್ಯ ಗೋಯಲ್‌ 3 ವಿಕೆಟ್‌ ಕಿತ್ತರು.

ಶಿವಮೊಗ್ಗದ ಓಟಕ್ಕೆ ಬ್ರೇಕ್‌

ದಿನದ ಮತ್ತೊಂದು ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ನ ಗೆಲುವಿನ ಓಟಕ್ಕೆ ಮೈಸೂರು ವಾರಿಯರ್ಸ್‌ ತಂಡ ತಡೆಯೊಡ್ಡಿತು. 4 ಪಂದ್ಯಗಳಲ್ಲಿ ಶಿವಮೊಗ್ಗ ಮೊದಲ ಸೋಲು ಕಂಡರೆ, ಮೈಸೂರು 2ನೇ ಜಯ ಕಂಡಿತು. ಮೊದಲು ಬ್ಯಾಟ್‌ ಮಾಡಿದ ಮೈಸೂರು, ಕರುಣ್‌ ನಾಯರ್‌(33 ಎಸೆತದಲ್ಲಿ 60), ಕಾರ್ತಿಕ್‌(46) ಅಬ್ಬರದಿಂದಾಗಿ 9 ವಿಕೆಟ್‌ಗೆ 190 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಶಿವಮೊಗ್ಗ 9 ವಿಕೆಟ್‌ಗೆ 178 ರನ್‌ ಗಳಿಸಿ, 12 ರನ್‌ಗಳಿಂದ ಪರಾಭವಗೊಂಡಿತು.