Asianet Suvarna News Asianet Suvarna News

ಏಷ್ಯಾ​ಕಪ್‌ಗೆ ಪಾಕ್‌, ಶ್ರೀಲಂಕಾ ಆತಿ​ಥ್ಯ? ಹೈಬ್ರಿಡ್‌ ಮಾದರಿಗೆ ಬಿಸಿಸಿಐ ಸಮ್ಮತಿ?

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಆಯೋಜನೆಗೆ ಪಾಕಿಸ್ತಾನ ಹೊಸ ಪ್ಲಾನ್
ಪಾಕಿ​ಸ್ತಾ​ನದ ಹೈಬ್ರಿಡ್‌ ಮಾದ​ರಿಗೆ ಏಷ್ಯನ್‌ ಕ್ರಿಕೆಟ್‌ ಸಮಿ​ತಿ​(​ಎ​ಸಿ​ಸಿ) ಒಪ್ಪಿಗೆ ನೀಡುವ ಸಾಧ್ಯತೆ
ಈ ಬಗ್ಗೆ ಮಂಗಳವಾರ ಅಧಿಕೃತವಾ​ಗಿ ಘೋಷಿಸುವ ನಿರೀ​ಕ್ಷೆ​
 

Asia Cup 2023 Cricket tournament set to be played in Pakistan and Sri Lanka says report kvn
Author
First Published Jun 12, 2023, 9:24 AM IST

ನವ​ದೆ​ಹ​ಲಿ(ಜೂ.12): ಭಾರೀ ಗೊಂದಲ, ಸಂಘ​ರ್ಷಕ್ಕೆ ಕಾರ​ಣ​ವಾ​ಗಿದ್ದ ಏಷ್ಯಾ​ಕಪ್‌ ಟೂರ್ನಿಯ ಪಾಕಿ​ಸ್ತಾ​ನದ ಹೈಬ್ರಿಡ್‌ ಮಾದ​ರಿಗೆ ಏಷ್ಯನ್‌ ಕ್ರಿಕೆಟ್‌ ಸಮಿ​ತಿ​(​ಎ​ಸಿ​ಸಿ) ಒಪ್ಪಿಗೆ ನೀಡಿದೆ ಎಂದು ಹೇಳ​ಲಾ​ಗು​ತ್ತಿದ್ದು, ಟೂರ್ನಿ ಪಾಕಿ​ಸ್ತಾನ ಹಾಗೂ ಶ್ರೀಲಂಕಾ​ದಲ್ಲಿ ನಡೆ​ಯ​ಲಿದೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ಈ ಬಗ್ಗೆ ಮಂಗಳವಾರ ಅಧಿಕೃತವಾ​ಗಿ ಘೋಷಿಸುವ ನಿರೀ​ಕ್ಷೆ​ಯಿದೆ. ಈ ನಡುವೆ ಪಾಕಿಸ್ತಾನ, ಐಸಿಸಿ ಏಕ​ದಿನ ವಿಶ್ವ​ಕ​ಪ್‌ನ ಭಾರತ ವಿರು​ದ್ಧದ ಪಂದ್ಯ​ವನ್ನು ಅಹ​ಮ​ದಾ​ಬಾ​ದ್‌​ನಲ್ಲಿ ಆಡಲು ಒಪ್ಪಿಗೆ ಸೂಚಿ​ಸಿದೆ ಎಂದು ವರ​ದಿ​ಯಾ​ಗಿ​ದೆ.

ಏಷ್ಯಾ​ಕಪ್‌ ಟೂರ್ನಿಯ (Asia Cup Cricket Tournament) ಆತಿಥ್ಯ ಹಕ್ಕು ಪಾಕ್‌ ಬಳಿ ಇದ್ದರೂ ಭಾರತ ಅಲ್ಲಿಗೆ ತೆರ​ಳು​ವು​ದಿಲ್ಲ ಎಂದಿ​ದ್ದ​ರಿಂದ ಪಾಕ್‌ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಹೈಬ್ರಿಡ್‌ ಮಾದ​ರಿಯ ಪ್ರಸ್ತಾ​ಪ​ವಿ​ರಿ​ಸಿತ್ತು. ಅಂದರೆ 4 ಪಂದ್ಯ​ಗ​ಳನ್ನು ಪಾಕ್‌​ನಲ್ಲಿ ನಡೆಸಿ, ಭಾರತ ತಂಡ ಆಡ​ಲಿ​ರುವ ಉಳಿದ ಪಂದ್ಯ​ಗ​ಳನ್ನು ಬೇರೆ ಕಡೆ ನಡೆಸಲು ಉದ್ದೇ​ಶಿ​ಸಿತ್ತು. ಆದರೆ ಮೊದ​ಲಿಗೆ ಬಿಸಿ​ಸಿಐ ಹಾಗೂ ಇತರ ದೇಶ​ಗಳು ಇದನ್ನು ವಿರೋ​ಧಿ​ಸಿದ್ದವು. ಆದರೆ ಸದ್ಯ ಸಮಸ್ಯೆ ಬಗೆ​ಹ​ರಿ​ದಿದ್ದು, ಪಾಕ್‌ನ ಲಾಹೋ​ರ್‌​ನಲ್ಲಿ 4 ಪಂದ್ಯ​ಗಳು ನಡೆ​ದರೆ ಉಳಿದ ಪಂದ್ಯ​ಗಳಿಗೆ ಲಂಕಾದ ಗಾಲೆ ಅಥವಾ ಪಲ್ಲೆಕೆಲೆ ಆತಿಥ್ಯ ವಹಿ​ಸ​ಲಿದೆ ಎಂದು ತಿಳಿ​ದು​ಬಂದಿದೆ. ಟೂರ್ನಿ ಸೆಪ್ಟೆಂಬ​ರ್‌​ನಲ್ಲಿ ನಡೆ​ಯಬೇಕಿದೆ. ಒಂದು ವೇಳೆ ಏಷ್ಯಾಕಪ್ ಟೂರ್ನಿಯನ್ನಾಡಲು ಟೀಂ ಇಂಡಿಯಾವು, ಪಾಕಿಸ್ತಾನ ಪ್ರವಾಸ ಮಾಡದಿದ್ದರೇ, ಪಾಕಿಸ್ತಾನ ತಂಡವು ಐಸಿಸಿ ಏಕದಿನ ಟೂರ್ನಿಯನ್ನು ಬಾಯ್ಕಾಟ್ ಮಾಡುವ ಬೆದರಿಕೆಯನ್ನು ಒಡ್ಡಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಈ ಬೆದರಿಕೆಗೆ ಬಿಸಿಸಿಐ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ರಾಗ ಬದಲಿಸಿರುವ ಪಿಸಿಬಿ ಇದೀಗ ಹೈಬ್ರೀಡ್‌ ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ಆಯೋಜಿಸಲು ಮುಂದಾಗಿದೆ. 

ಐಸಿಸಿ ಟ್ರೋಫಿ ಗೆಲುವು ಸುಲಭವಲ್ಲ, ಸುಲಭವಾಗಿ ಕಾಣುವಂತೆ ಮಾಡಿದ್ದ ಧೋನಿ; ಟೀಂ ಇಂಡಿಯಾಗೆ ಫ್ಯಾನ್ಸ್ ಪಾಠ!

ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು 2012ರ ಬಳಿಕ ಇದುವರೆಗೂ ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಕೇವಲ ತಟಸ್ಥ ಸ್ಥಳಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಇದೀಗ ESPNcricinfo ವೆಬ್‌ಸೈಟ್‌ ವರದಿಯ ಪ್ರಕಾರ, ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಮುಂಬರುವ ಸೆಪ್ಟೆಂಬರ್ 01ರಿಂದ 17ರ ನಡುವೆ ನಡೆಸಲು ತೀರ್ಮಾನಿಸಲಾಗಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಪಂದ್ಯಾವಳಿಗಳನ್ನು ಲಾಹೋರ್‌ನಲ್ಲಿ ಆಯೋಜಿಸಲು ಪಿಸಿಬಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳುತ್ತಿದ್ದು, ತಲಾ 3 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಇರುವ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಸ್ಥಾನ ಪಡೆದಿವೆ. ಇನ್ನೊಂದು ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಮುಂಬರುವ ಅಕ್ಟೋಬರ್‌ನಲ್ಲಿ ಭಾರತದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗುವುದರಿಂದಾಗಿ ಏಷ್ಯಾಕಪ್ ಟೂರ್ನಿಯು ಕೂಡಾ ಪೂರ್ವಭಾವಿ ಸಿದ್ದತೆಗೋಸ್ಕರ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಪಂದ್ಯಾಟಗಳು ಜರುಗಲಿವೆ.

ಏಷ್ಯಾಕಪ್ ಟೂರ್ನಿಯು ಒಟ್ಟು 13 ದಿನಗಳ ಅವಧಿಯಲ್ಲಿ ಫೈನಲ್‌ ಸೇರಿದಂತೆ ಒಟ್ಟು 13 ಪಂದ್ಯಗಳು ಜರುಗಲಿವೆ. 2022ರಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಮಾದರಿಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೂಪರ್ 4 ಹಂತ ಪ್ರವೇಶಿಸಲಿವೆ. ಸೂಪರ್ 4 ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ ಪ್ರವೇಶಿಸಿದರೆ, ಈ ಎರಡು ತಂಡಗಳು ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವ ಸಾಧ್ಯತೆಯಿದೆ.

Follow Us:
Download App:
  • android
  • ios