ಐಸಿಸಿ ಟ್ರೋಫಿ ಗೆಲುವು ಸುಲಭವಲ್ಲ, ಸುಲಭವಾಗಿ ಕಾಣುವಂತೆ ಮಾಡಿದ್ದ ಧೋನಿ; ಟೀಂ ಇಂಡಿಯಾಗೆ ಫ್ಯಾನ್ಸ್ ಪಾಠ!
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಟ್ರೋಫಿ ಗೆಲ್ಲುವ ಅವಕಾಶ ಕೈತಪ್ಪಿದೆ. ಇದರ ಬೆನ್ನಲ್ಲೇ ರವಿ ಶಾಸ್ತ್ರಿ ನೀಡಿದ ಹೇಳಿಕೆ ಭಾರಿ ವೈರಲ್ ಆಗಿದೆ. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಅಭಿಮಾನಿಗಳು ಟೀಂ ಇಂಡಿಯಾ ಕ್ರಿಕೆಟಿರಿಗೆ ಕ್ಲಾಸ್ ತೆಗುದುಕೊಂಡಿದ್ದಾರೆ.
ಓವಲ್(ಜೂ.11): ಐಸಿಸಿ ಟ್ರೋಫಿ ಗೆಲ್ಲುವುದು ಸುಲಭವಲ್ಲ, ಆದರೆ ಧೋನಿ ಸುಲಭವಾಗಿ ಕಾಣುವಂತೆ ಮಾಡಿದ್ದರು ಎಂದು ಮಾಜಿ ಕೋಚ್, ಕಮೆಂಟೇಟರ್ ರವಿ ಶಾಸ್ತ್ರಿ ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ. ಭಾರತ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಹೀನಾಯ ಸೋಲು ಕಾಣುತ್ತಿದ್ದಂತೆ ಟೀಂ ಇಂಡಿಯಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಇದರ ಬೆನ್ನಲ್ಲೇ ರವಿ ಶಾಸ್ತ್ರಿ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಅಭಿಮಾನಿಗಳು, ಟೀಂ ಇಂಡಿಯಾ ಕ್ರಿಕೆಟಿಗರು ಐಪಿಎಲ್ ಟೂರ್ನಿ ಆಡಲು ಲಾಯಕ್ಕು, ಐಸಿಸಿ ಟೂರ್ನಿಗಲ್ಲ ಎಂದಿದ್ದಾರೆ.
ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿಯ ಎಲ್ಲಾ ಟ್ರೋಫಿ ಗೆದ್ದುಕೊಂಡಿತ್ತು. ಈ ಸಾಧನೆ ಮಾಡಿದ ವಿಶ್ವದ ಏಕೈಕ ನಾಯಕ ಎಂ.ಎಸ್. ಧೋನಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮಾಜಿ ನಾಯಕ ಧೋನಿ 2007ರಲ್ಲಿ ಟಿ20 ವಿಶ್ವಕಪ್, 2000-10ರಲ್ಲಿ ಟೆಸ್ಟ್ ನಂಬರ್ 1 ಸ್ಥಾನ, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ಐಸಿಸಿ ಟ್ರೋಫಿ ಗೆಲ್ಲುವುದು ಸುಲಭವಾಗಿತ್ತು. ಧೋನಿ ಅದನ್ನು ಸುಲಭವಾಗಿ ಕಾಣುವಂತೆ ಮಾಡಿದ್ದರು. ಆದರೆ ಐಸಿಸಿ ಟ್ರೋಫಿ ಗೆಲುವಿಗೆ ಕಠಿಣ ಪರಿಶ್ರಮ ಅಗತ್ಯ ಎಂದು ರವಿ ಶಾಸ್ತ್ರಿ ಸೂಚ್ಯವಾಗಿ ಹೇಳಿದ್ದರು.
ಐಪಿಎಲ್ ಆರಂಭಕ್ಕೆ 10 ತಿಂಗಳು ಮಾತ್ರ, ಟೆಸ್ಟ್ ಫೈನಲ್ ಸೋತ ಬೆನ್ನಲ್ಲೇ ಅಭಿಮಾನಿಗಳ ಆಕ್ರೋಶ!
ಇದೀಗ ಮಾತನ್ನು ಅಭಿಮಾನಿಗಳು ಟೀಂ ಇಂಡಿಯಾಗೆ ಬಳಸಿದ್ದಾರೆ. ಸದ್ಯದ ಟೀಂ ಇಂಡಿಯಾ ಐಪಿಎಲ್ ಟೂರ್ನಿ ಆಡಲು ಸೂಕ್ತ. ಜಿದ್ದಾಜಿದ್ದಿನ ಹೋರಾಟ, ಸ್ಲೆಡ್ಜಿಂಗ್, ಹೊಡಿ ಬಡಿ ಆಟ, ಸೆಂಚುರಿ, ದಾಖಲೆ ಎಲ್ಲವೂ ಐಪಿಎಲ್ ಟೂರ್ನಿಯಲ್ಲಿ ಮಾತ್ರ. ಆದರೆ ಐಸಿಸಿ ಟೂರ್ನಿ ಬಂದಾಗ ಎಲ್ಲರು ಸೈಲೆಂಟ್. ಆದರೆ ಧೋನಿ ಐಸಿಸಿ ಟೂರ್ನಿಯಾಗಲಿ, ಐಪಿಎಲ್ ಟೂರ್ನಿಯಲ್ಲಾಗಲಿ ಎಲ್ಲಾ ಮಾದರಿಯಲ್ಲೂ ಧೋನಿ ಟ್ರೋಫಿ ಗೆದ್ದುಕೊಂಡಿದ್ದಾರೆ.
ಧೋನಿ ನಾಯಕತ್ವದಲ್ಲಿ ಆಡಿದ 4 ಫೈನಲ್ ಪಂದ್ಯದಲ್ಲಿ ಭಾರತ 3 ಗೆದ್ದುಕೊಂಡಿದೆ. ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಂ ಇಂಡಿಯಾ 7 ಫೈನಲ್ ಪಂದ್ಯ ಆಡಿದ ಒಂದರಲ್ಲೂ ಭಾರತ ಗೆಲುವು ಕಂಡಿಲ್ಲ. ಇದೀಗ ರೋಹಿತ್ ಶರ್ಮಾ ನಾಯಕತ್ವ, ವಿರಾಟ್ ಕೊಹ್ಲಿ ಬ್ಯಾಟಿಂಗ್, ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ, ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯದಲ್ಲಿ ಮಕಾಡೆ ಮಲಗಿದ ಬ್ಯಾಟ್ಸ್‌ಮನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.