ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭಏಷ್ಯಾಕಪ್ ಟೂರ್ನಿಗಾಗಿ ಭರ್ಜರಿ ಅಭ್ಯಾಸ ನಡೆಸುತ್ತಿರುವ ವಿರಾಟ್ ಕೊಹ್ಲಿಪಾಕ್ ಎದುರು ಅಬ್ಬರಿಸಲು ನೆಟ್ಸ್‌ನಲ್ಲಿ ಬೆವರು ಹರಿಸುತ್ತಿರುವ ಕಿಂಗ್ ಕೊಹ್ಲಿ

ದುಬೈ(ಆ.25): ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು, ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ಬಂದಿಳಿದೆ. ಇದೀಗ ಎಲ್ಲರ ಚಿತ್ತ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ಸಾಕಷ್ಟು ವಿಶ್ರಾಂತಿಯ ಬಳಿಕ ಟೀಂ ಇಂಡಿಯಾ ಕೂಡಿಕೊಂಡಿರುವ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಈಗಾಗಲೇ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಎದುರಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವುದು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇದೀಗ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್‌ 27ರಿಂದ ಆರಂಭವಾಗಲಿದ್ದು, ಭಾರತ ಕ್ರಿಕೆಟ್ ತಂಡವು ಆಗಸ್ಟ್‌ 28 ರಂದು ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಪಂದ್ಯದ ಮೂಲಕವೇ ಫಾರ್ಮ್‌ಗೆ ಮರಳಲು ವಿರಾಟ್ ಕೊಹ್ಲಿ, ದುಬೈಗೆ ಬಂದಿಳಿಯುತ್ತಿದ್ದಂತೆಯೇ ನೆಟ್ಸ್‌ನಲ್ಲಿ ಭರ್ಜರಿಯಾಗಿಯೇ ತಯಾರಿ ನಡೆಸುವ ಮೂಲಕ ಬೆವರು ಹರಿಸುತ್ತಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ನೆಟ್ಸ್‌ ಪ್ರಾಕ್ಟೀಸ್‌ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್ ಎಸೆತಗಳನ್ನು ಸಿಕ್ಸರ್‌ಗಟ್ಟುವ ಮೂಲಕ ಭರ್ಜರಿಯಾಗಿಯೇ ಅಭ್ಯಾಸ ನಡೆಸುತ್ತಿದ್ದಾರೆ. 

Scroll to load tweet…

ಏಷ್ಯಾಕಪ್ ಟೂರ್ನಿಗಾಗಿ ದುಬೈಗೆ ವಿಮಾನ ಏರುವ ಮುನ್ನ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿನ್ನು ದುಬೈಗೆ ತೆರಳಿಲ್ಲ. ಹೀಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಹಂಗಾಮಿ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಿಸಿದೆ. ವಿವಿಎಸ್‌ ಲಕ್ಷ್ಮಣ್‌, ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿರುವುದನ್ನು ಗಮನಿಸಿದರು.

Asia Cup 2022 ಟೂರ್ನಿಗೂ ಮುನ್ನ ಬಾಬರ್ ಅಜಂ ಕೈ ಕುಲುಕಿದ ವಿರಾಟ್ ಕೊಹ್ಲಿ..! ವಿಡಿಯೋ ವೈರಲ್

ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ತನ್ನ ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿವೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್‌ ಅವರಿಲ್ಲದೇ ಕಣಕ್ಕಿಳಿಯುತ್ತಿದೆ. ಇನ್ನು ಪಾಕಿಸ್ತಾನ ತಂಡವು ಶಾಹೀನ್ ಅಫ್ರಿದಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ.

ಭಾರತ ಕ್ರಿಕೆಟ್ ತಂಡವು ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಎದುರು ಮುಖಾಮುಖಿಯಾಗಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಎದುರು 10 ವಿಕೆಟ್ ಗಳ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಇದೀಗ ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.