ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯಕ್ಕೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಅರ್ಹತೆ ಪಡೆದಿದೆ. ಹೀಗಾಗಿ ಇಂದು ನಡೆಯಲಿರುವ ಸೂಪರ್ 4 ಹಂತದ ಕೊನೆಯ ಪಂದ್ಯ ಪಾಕ್ ಹಾಗೂ ಶ್ರೀಲಂಕಾ ತಂಡಕ್ಕೆ ರಿಹರ್ಸಲ್ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ದುಬೈ(ಸೆ.09): ಏಷ್ಯಾಕಪ್ ಟೂರ್ನಿ ಅಂತಿಮ ಘಟ್ಟದಲ್ಲಿದೆ. ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದೆ. ಸೆಪ್ಟೆಂಬರ್ 11 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಈಗಾಗಲೇ ಶ್ರೀಲಂಕಾ ಹಾಗೂ ಪಾಕಿಸ್ತಾನ ಅರ್ಹತೆ ಪಡೆದಿದೆ. ಆದರೆ ಈ ಪಂದ್ಯದ ಫಲಿತಾಂಶ ಉಭಯ ತಂಡಕ್ಕೂ ಮುಖ್ಯವಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆಯುವ ರಿಹರ್ಸಲ್ ಪಂದ್ಯವಾಗಿ ಮಾರ್ಪಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಶ್ರೀಲಂಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಪ್ರಮೋದ್ ಮಧುಶನ್ ಲಂಕಾ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇತ್ತ ಪಾಕಿಸ್ತಾನ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಉಸ್ಮನ್ ಖಾದಿರ್ ಹಾಗೂ ಹಸನ್ ಅಲಿ ತಂಡ ಸೇರಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿದ ಶ್ರೀಲಂಕಾ(Sri lanka) ಹಾಗೂ ಪಾಕಿಸ್ತಾನ(Pakistan) ತಂಡ ಇದೀಗ ಫೈನಲ್ (Asia Cup Final 2022) ಪ್ರವೇಶಿಸಿದೆ. ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಉದ್ಘಟನಾ ಪಂದ್ಯದಲ್ಲಿ ಶ್ರೀಲಂಕಾ, ಆಫ್ಘಾನಿಸ್ತಾನ(Afghanistan) ವಿರುದ್ಧ ಮುಗ್ಗರಿಸಿತ್ತು. ಇತ್ತ ಪಾಕಿಸ್ತಾನ ತಂಡ ಭಾರತದ(India) ವಿರುದ್ಧ ಸೋಲು ಅನುಭವಿಸಿತ್ತು. ಆದರೆ ಉಳಿದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಫೈನಲ್ ಪ್ರವೇಶಿಸಿತ್ತು. 

ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯಲ್ಲಿ, ಫೈನಲ್‌ಗೂ ಮುನ್ನ ಒಬ್ಬರ ಮೇಲೊಬ್ಬರು ಮೇಲುಗೈ ಸಾಧಿಸಿ, ಮಾನಸಿಕ ಮುನ್ನಡೆ ಪಡೆಯಲು ಎದುರು ನೋಡುತ್ತಿವೆ. ಉಭಯ ತಂಡಗಳು ಆಡಿರುವ ಎರಡೂ ಪಂದ್ಯಗಳಲ್ಲಿ ಗುರಿ ಬೆನ್ನತ್ತಿ ಜಯಗಳಿಸಿವೆ. ಹೀಗಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ ಹೇಗೆ ಒತ್ತಡ ನಿಭಾಯಿಸಲಿದೆ ಎನ್ನುವ ಕುತೂಹಲವಿದೆ. 

ಲಂಕಾ-ಪಾಕ್‌ ಫೈನಲ್‌
ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಈಗಾಗಲೇ ಪ್ರವೇಶಿಸಿದೆ. ಬುಧವಾರ ನಡೆದ ಸೂಪರ್‌-4 ಹಂತದ ಅಷ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್‌ ಜಯ ಸಾಧಿಸಿತು. ತಲಾ 2 ಗೆಲುವು ಕಂಡಿರುವ ಪಾಕಿಸ್ತಾನ ಹಾಗೂ ಲಂಕಾ, ಸೆ.11ರಂದು ನಡೆಯಲಿರುವ ಫೈನಲ್‌ನಲ್ಲಿ ಆಡಲು ಅರ್ಹತೆ ಪಡೆಯಿತು. ಆದರೆ ಭಾರತ ಹಾಗೂ ಅಷ್ಘಾನಿಸ್ತಾನ ಫೈನಲ್‌ ರೇಸ್‌ನಿಂದ ಹೊರಬಿದಿತ್ತು.

ಪಾಕ್‌ ಶಿಸ್ತುಬದ್ಧ ದಾಳಿ: ಅಷ್ಘಾನಿಸ್ತಾನದ ಅಗ್ರ ಕ್ರಮಾಂಕ ಸ್ಫೋಟಕ ಆಟಕ್ಕಿಳಿದರೂ ಪಾಕಿಸ್ತಾನಿ ಬೌಲರ್‌ಗಳು ನಿರಂತರವಾಗಿ ವಿಕೆಟ್‌ ಉರುಳಿಸುತ್ತಾ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಇಬ್ರಾಹಿಂ 35 ರನ್‌, ಹಜರತ್ತುಲ್ಲಾ 21 ರನ್‌ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ್ಯಾರೂ 20 ರನ್‌ ತಲುಪಲಿಲ್ಲ. ಪಾಕಿಸ್ತಾನ ಪರ ರೌಫ್‌ 2, ನಸೀಂ, ಹಸ್ನೈನ್‌, ನವಾಜ್‌, ಶದಾಬ್‌ ತಲಾ 1 ವಿಕೆಟ್‌ ಕಿತ್ತರು. ಮುಖ್ಯವಾಗಿ ಪಾಕ್‌ ಬೌಲರ್‌ಗಳು ಒಟ್ಟು 54 ಡಾಟ್‌ ಬಾಲ್‌ಗಳನ್ನು ಎಸೆದು ಆಫ್ಘನ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದರು.