ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಬದ್ದವೈರಿಗಳ ನಡುವಿನ ಕಾದಾಟಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯಮತ್ತೊಂದು ಜಯದ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ

ದುಬೈ(ಸೆ.04): ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ 2022ರ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಭಾನುವಾರ 2ನೇ ಬಾರಿಗೆ ಮುಖಾಮುಖಿಯಾಗಲಿವೆ. ಸೂಪರ್‌-4 ಹಂತದಲ್ಲಿ ಮೊದಲ ಪಂದ್ಯವನ್ನಾಡಲಿರುವ ಉಭಯ ತಂಡಗಳು, ಶುಭಾರಂಭ ಮಾಡಿ ಫೈನಲ್‌ನಲ್ಲಿ ಸ್ಥಾನ ಪಡೆಯುವತ್ತ ದಿಟ್ಟ ಹೆಜ್ಜೆ ಇಡಲು ಎದುರು ನೋಡುತ್ತಿವೆ.

ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ಭಾರತ ಮತ್ತೊಂದು ಜಯದ ವಿಶ್ವಾಸದಲ್ಲಿದೆ. ಆದರೆ ತಂಡ ಕೆಲ ಸಮಸ್ಯೆಗಳನ್ನು ಜವಾಬ್ದಾರಿಯಿಂದ ನಿಭಾಯಿಸಿದರಷ್ಟೇ ಗೆಲುವು ಒಲಿಯಲಿದೆ. ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಇನ್ನಿಂಗ್ಸ್‌ ಕಟ್ಟುವತ್ತ ತೋರುವ ದಿಟ್ಟತನ ಹಾಗೂ ವೇಗಿ ಆವೇಶ್‌ ಖಾನ್‌ರ ಬೌಲಿಂಗ್‌ ಪ್ರದರ್ಶನ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್‌ ಪಟೇಲ್‌ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಹೀಗಾಗಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಅವಕಾಶ ಕಳೆದುಕೊಂಡಿದ್ದ ರಿಷಭ್‌ ಪಂತ್‌ಗೆ ಸ್ಥಾನ ಸಿಗಲಿದೆ. ಅಗ್ರ 3 ಬ್ಯಾಟರ್‌ಗಳಾದ ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಉತ್ತಮ ಸ್ಟ್ರೈಕ್‌ರೇಟ್‌ನೊಂದಿಗೆ ಬ್ಯಾಟ್‌ ಬೀಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್‌, ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ ಇದ್ದರೂ ಅಗ್ರ ಕ್ರಮಾಂಕದ ಪ್ರದರ್ಶನ ಮಹತ್ವದೆನಿಸಲಿದೆ. ಅಲ್ಲದೇ ಹಾಂಕಾಂಗ್‌ ವಿರುದ್ಧ ದೊಡ್ಡ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿರುವ ಪಾಕಿಸ್ತಾನದ ಬೌಲಿಂಗ್‌ ಪಡೆಯನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು.

ಇನ್ನು ದುಬಾರಿಯಾಗುತ್ತಿರುವ ಆವೇಶ್‌ ಖಾನ್‌ ಹಾಗೂ ಅಶ್‌ರ್‍ದೀಪ್‌ ಸಿಂಗ್‌ ಮೇಲೆ ಒತ್ತಡವಿದ್ದು, ಇಬ್ಬರೂ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಈ ಪಂದ್ಯದಲ್ಲಿ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ. ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌ ಮತ್ತೊಮ್ಮೆ ಟ್ರಂಪ್‌ ಕಾರ್ಡ್‌ಗಳೆನಿಸಲಿದ್ದಾರೆ.

Ravindra Jadeja Injury ಟೀಂ ಇಂಡಿಯಾಗೆ ಬಿಗ್ ಶಾಕ್, ಟಿ20 ವಿಶ್ವಕಪ್ ಟೂರ್ನಿಯಿಂದ ಜಡೇಜಾ ಔಟ್!

ಮತ್ತೊಂದಡೆ ಬಾಬರ್‌ ಆಜಂ ಲಯ ಕಳೆದುಕೊಂಡಿರುವುದು ಭಾರತದ ಪಾಲಿಗೆ ಒಳ್ಳೆಯ ಸುದ್ದಿ. ಆದರೆ ಮೊಹಮದ್‌ ರಿಜ್ವಾನ್‌ ಅಪಾಯಕಾರಿ ಆಗಬಲ್ಲರು ಎನ್ನುವುದನ್ನು ಮರೆಯುವಂತಿಲ್ಲ. ಪಾಕಿಸ್ತಾನದ ಮಧ್ಯಮ ಕ್ರಮಾಂಕ ಸಹ ಬಲಿಷ್ಠವಾಗಿದ್ದು, ಭಾರತೀಯ ಬೌಲರ್‌ಗಳು ಹೆಚ್ಚಿನ ಪರಿಶ್ರಮ ವಹಿಸಬೇಕಿದೆ. ಗಾಯಗೊಂಡಿರುವ ವೇಗಿ ಶಹನವಾಜ್‌ ದಹಾನಿ ಪಂದ್ಯದಿಂದ ಹೊರಬಿದ್ದಿದ್ದಾರೆ. ಒಟ್ಟಿನಲ್ಲಿ ಕಳೆದ ಭಾನುವಾರದಂತೆ ಈ ಭಾನುವಾರವೂ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಭಾರೀ ಮನರಂಜನೆ ಒದಗಿಸಲಿದೆ ಎನ್ನುವುದಂತೂ ಸತ್ಯ.

ಏಷ್ಯಾಕಪ್ ಟೂರ್ನಿಯ ಗ್ರೂಪ್‌ ಹಂತದ ಮುಖಾಮುಖಿಯಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ 5 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿತ್ತು. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಪ್ರದರ್ಶನ ತೋರುವ ಮೂಲಕ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ರಿಷಭ್ ಪಂತ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್, ಭುವನೇಶ್ವರ್‌ ಕುಮಾರ್, ಯುಜುವೇಂದ್ರ ಚಹಲ್‌, ಆವೇಶ್‌ ಖಾನ್, ಅಶ್‌ರ್‍ದೀಪ್‌ ಸಿಂಗ್.

ಪಾಕಿಸ್ತಾನ: ಬಾಬರ್‌ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್‌, ಫಖರ್‌ ಜಮಾನ್, ಖುಷ್ದಿಲ್‌ ಶಾ, ಇಫ್ತಿಖರ್‌ ಅಹಮ್ಮದ್, ಆಸಿಫ್‌ ಅಲಿ, ಶದಾಬ್‌ ಖಾನ್‌, ಮೊಹಮ್ಮದ್ ನವಾಜ್‌, ಹ್ಯಾರಿಸ್‌ ರೌಫ್‌, ನಸೀಂ ಶಾ, ಹಸನ್‌ ಅಲಿ.

ಪಂದ್ಯ: ಸಂಜೆ 7.30ಕ್ಕೆ
ಸ್ಥಳ: ದುಬೈ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್