* ಏಷ್ಯಾಕಪ್ ಫೈನಲ್‌ನಲ್ಲಿ ರೋಚಕ ಸೋಲು ಅನುಭವಿಸಿದ ಪಾಕಿಸ್ತಾನ* ಪಾಕಿಸ್ತಾನ ಎದುರು ಶ್ರೀಲಂಕಾಗೆ 23 ರನ್‌ಗಳ ರೋಚಕ ಜಯ* ರಕ್ಷಣಾತ್ಮಕ ಬ್ಯಾಟಿಗ್ ನಡೆಸಿದ ಮೊಹಮ್ಮದ್ ರಿಜ್ವಾನ್ ಪರ ಕೋಚ್ ಸಮರ್ಥನೆ
ದುಬೈ(ಸೆ.12): 2022ನೇ ಸಾಲಿನ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಭರ್ಜರಿಯಾಗಿ ಮಣಿಸಿದ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡವು ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಫೈನಲ್ ಪಂದ್ಯದಲ್ಲಿ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿ ಅರ್ಧಶತಕ ಬಾರಿಸಿದ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಶೈಲಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಸಕ್ಲೈನ್ ಮುಷ್ತಾಕ್, ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್ ಪರ ಬ್ಯಾಟ್ ಬೀಸಿದ್ದಾರೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 171 ರನ್‌ಗಳ ಕಠಿಣ ಗುರಿ ಬೆನ್ನತಿದ ಪಾಕಿಸ್ತಾನ ತಂಡಕ್ಕೆ ಸ್ಪೋಟಕ ಆರಂಭದ ಅಗತ್ಯವಿತ್ತು. ಆದರೆ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 49 ಎಸೆತಗಳಲ್ಲಿ ಕೇವಲ 55 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಲಂಕಾ ಬೌಲರ್‌ಗಳ ಶಿಸ್ತುಬದ್ದ ದಾಳಿ ಎದುರು ರಿಜ್ವಾನ್ ಮೈಚಳಿ ಬಿಟ್ಟು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಪರಿಣಾಮ ಪಾಕಿಸ್ತಾನ ಕ್ರಿಕೆಟ್ ತಂಡವು 147 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 23 ರನ್‌ಗಳ ಅಂತರದ ಜಯ ಸಾಧಿಸಿದ ಶ್ರೀಲಂಕಾ ಕ್ರಿಕೆಟ್ ತಂಡವು ಆರನೇ ಬಾರಿಗೆ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಯಿತು.
ಮೊಹಮ್ಮದ್ ರಿಜ್ವಾನ್ ಅವರ ರಕ್ಷಣಾತ್ಮಕ ಆಟದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇನ್ನು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡಾ , ಪಾಕಿಸ್ತಾನ ತಂಡ ಹಾಗೂ ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟಿಂಗ್ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ಕಾಂಬೇನೇಷನ್ ಸರಿಯಾಗಿ ವರ್ಕ್ ಆಗಿಲ್ಲ. ಪಾಕಿಸ್ತಾನ ತಂಡವು ಸಾಕಷ್ಟು ವಿಷಯಗಳ ಬಗ್ಗೆ ಗಮನ ಹರಿಸಬೇಕಿದೆ. ಫಖರ್, ಇಫ್ತಿಕರ್, ಖುಷ್ದಿಲ್ ಎಲ್ಲರೂ ಗಮನ ಹರಿಸಬೇಕಿದೆ. ಮತ್ತೆ ರಿಜ್ವಾನ್ 50 ಎಸೆತಗಳಲ್ಲಿ 50 ರನ್ ಬಾರಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದ ಪಾಕಿಸ್ತಾನಕ್ಕೂ ಪ್ರಯೋಜನವಿಲ್ಲ. ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಶೋಯೆಬ್ ಅಖ್ತರ್ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
Catches win matches: ಏಷ್ಯಾಕಪ್ ಫೈನಲ್ ಸೋಲಿನ ಹೊಣೆ ಹೊತ್ತ ಪಾಕ್ ಉಪನಾಯಕ ಶಾದಾಬ್ ಖಾನ್..!
ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಕೋಚ್ ಸಕ್ಲೈನ್ ಮುಷ್ತಾಕ್, ಹೊರಗೆ ನಿಂತು ಕಾಮೆಂಟ್ ಮಾಡುವುದು ಸುಲಭ, ಆದರೆ ತಂಡದೊಳಗಿದ್ದು, ಪರಿಸ್ಥಿಗೆ ತಕ್ಕಂತೆ ಆಡುವುದು ಸುಲಭವಲ್ಲ ಎಂದು ಹೇಳಿದ್ದಾರೆ.
ಇದು ಅವರ ಮಿಸ್ಟೇಕ್ ಅಲ್ಲ. ಅವರು ಪಂದ್ಯದ ಫಲಿತಾಂಶ ಹಾಗೂ ಸ್ಕೋರ್‌ಬೋರ್ಡ್ ನೋಡಿಕೊಂಡು ಕಾಮೆಂಟ್ ಮಾಡುತ್ತಾರೆ. ಆದರೆ ಅವರಿಗೆ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಏನು ನಡೆಯುತ್ತಿರುತ್ತದೆ ಎಂದು ಅವರಿಗೆ ತಿಳಿಯುವುದಿಲ್ಲ. ಆದರೆ ಆಟಗಾರರು ಆತ್ಮವಿಶ್ವಾಸ ಹಾಗೂ ಗಾಯದ ಪರಿಸ್ಥಿತಿಯನ್ನು ಜತೆಗಿಟ್ಟುಕೊಂಡು ಆಡುತ್ತಿರುತ್ತಾರೆ ಎನ್ನುವ ಅರಿವಿರುವುದಿಲ್ಲ ಎಂದು ಮುಷ್ತಾಕ್ ಹೇಳಿದ್ದಾರೆ.
