ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಮುಗ್ಗರಿಸಿದ ಪಾಕಿಸ್ತಾನಪಾಕಿಸ್ತಾನ ಸೋಲಿಗೆ ಹೊಣೆ ಹೊತ್ತುಕೊಂಡ ಆಲ್ರೌಂಡರ್ ಶಾದಾಬ್ ಖಾನ್ಲಂಕಾ ಎದುರು ಎರಡು ಮಹತ್ವದ ಕ್ಯಾಚ್ ಕೈಚೆಲ್ಲಿದ ಶಾದಾಬ್ ಖಾನ್
ದುಬೈ(ಸೆ.12): ಕ್ರಿಕೆಟ್‌ನಲ್ಲಿ ಕ್ಯಾಚ್‌ಗಳು ಮ್ಯಾಚ್‌ಗಳನ್ನು ಗೆಲ್ಲಿಸುತ್ತವೆ ಎನ್ನುವ ಮಾತು ಏಷ್ಯಾಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಸಾಬೀತಾಗಿವೆ. ಶ್ರೀಲಂಕಾ ಕ್ರಿಕೆಟ್ ತಂಡವು, ಕ್ಷೇತ್ರರಕ್ಷಣೆಯಲ್ಲಿ ಅದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಆರನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ವೇಳೆ ಕ್ಯಾಚ್ ಕೈಚೆಲ್ಲಿದರೆ, ಮ್ಯಾಚ್ ಕೂಡಾ ಕೈ ತಪ್ಪಿ ಹೋಗುತ್ತದೆ ಎನ್ನುವುದು ಕೂಡಾ ಏಷ್ಯಾಕಪ್ ಫೈನಲ್‌ನಲ್ಲಿ ಸಾಬೀತಾಗಿದೆ. ಇದೀಗ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ದದ ಪಾಕಿಸ್ತಾನ ಸೋಲಿಗೆ ಕ್ಯಾಚ್ ಬಿಟ್ಟ ಶಾದಾಬ್ ಖಾನ್ ನೈತಿಕ ಹೊಣೆಹೊತ್ತಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಶ್ರೀಲಂಕಾ ಕ್ರಿಕೆಟ್ ತಂಡವು 23 ರನ್‌ಗಳ ರೋಚಕ ಜಯ ಸಾಧಿಸಿತ್ತು. ಆದರೆ ಇದೇ ಫೈನಲ್ ಪಂದ್ಯ ಪಾಕಿಸ್ತಾನದ ಅದ್ಭುತ ಕ್ಷೇತ್ರರಕ್ಷಕರಲ್ಲಿ ಒಬ್ಬರೆನಿಸಿಕೊಂಡಿರುವ ಶಾದಾಬ್ ಖಾನ್ ಪಾಲಿಗೆ ದುಸ್ವಪ್ನವಾಗಿ ಕಾಡುವಂತೆ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಶ್ರೀಲಂಕಾ ತಂಡವು ಆರಂಭಿಕ ಆಘಾತ ಅನುಭವಿಸಿತಾದರೂ, ಇನಿಂಗ್ಸ್‌ನ ಕೊನೆಯಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇನ್ನು ಕ್ಷೇತ್ರರಕ್ಷಣೆ ಮಾಡುವ ವೇಳೆ ಚೆಂಡು ಒಮ್ಮೆ ಶಾದಾಬ್ ಖಾನ್ ಅವರ ತಲೆಗೆ ಬಡಿಯಿತು. ಇದರ ಜತೆಗೆ ಶಾದಾಬ್ ಖಾನ್ ಎರಡು ಮಹತ್ವದ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಪೈಕಿ ಒಂದು ಕ್ಯಾಚ್ ಶಾದಾಬ್ ಕೈಯಿಂದ ಜಾರಿ ಸಿಕ್ಸರ್ ಗೆರೆ ದಾಟಿತು. ಈ ಕುರಿತಂತೆ ಟ್ವೀಟ್ ಮಾಡಿರುವ ಶಾದಾಬ್ ಖಾನ್, ಕ್ಯಾಚ್‌ಗಳು ಮ್ಯಾಚ್‌ಗಳನ್ನು ಗೆಲ್ಲಿಸುತ್ತವೆ. ಈ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ನನ್ನ ತಂಡ ಸೋಲಲು ನಾನು ಕಾರಣವಾಗಿದ್ದಕ್ಕೆ ಕ್ಷಮೆಯಿರಲಿ ಎಂದು ಟ್ವೀಟ್ ಮಾಡಿದ್ದಾರೆ.
Asia Cup ಟೂರ್ನಿಯಲ್ಲಿ ಬಾಬರ್ ಅಜಂ ಫೇಲ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್..!
ಈ ಕುರಿತಂತೆ ಟ್ವೀಟ್ ಮಾಡಿರುವ ಶಾದಾಬ್ ಖಾನ್, ಕ್ಯಾಚ್‌ಗಳು ಮ್ಯಾಚ್ ಗೆಲ್ಲಿಸುತ್ತವೆ. ಈ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ಪಾಕಿಸ್ತಾನ ತಂಡವು ಹಿನ್ನಡೆ ಅನುಭವಿಸುವಂತೆ ಆಗಲು ನಾನು ಕಾರಣವಾಗಿದ್ದಕ್ಕೆ ಕ್ಷಮೆಯಿರಲಿ. ಆದರೆ ತಂಡದ ಪಾಲಿಗೆ ಪಾಸಿಟಿವ್ ಅಂಶವೆಂದರೆ, ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಇಡೀ ಬೌಲಿಂಗ್ ತಂಡ ಅದ್ಭುತ ಪ್ರದರ್ಶನ ತೋರಿತು. ಮೊಹಮ್ಮದ್ ರಿಜ್ವಾನ್ ಕೂಡಾ ಒಳ್ಳೆಯ ಹೋರಾಟ ನೀಡಿದರು. ಇಡೀ ತಂಡ ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸಿತು. ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಶಾದಾಬ್ ಖಾನ್ ಟ್ವೀಟ್ ಮಾಡಿದ್ದಾರೆ.
ಲಾಂಗ್ ಆನ್‌ನಲ್ಲಿ ನಿಂತಿದ್ದ ಶಾದಾಬ್ ಖಾನ್, ಭಾನುಕಾ ರಾಜಪಕ್ಸಾ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯುವಲ್ಲಿ ವಿಫಲವಾದರು. ಇನ್ನು 19ನೇ ಓವರ್‌ನಲ್ಲಿ ಕೂಡಾ ಶಾದಾಬ್ ಖಾನ್ ಹಾಗೂ ಆಸಿಫ್ ಅಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಮತ್ತೊಮ್ಮೆ ಭಾನುಕಾ ರಾಜಪಕ್ಸಾ ಅವರ ಕ್ಯಾಚ್ ಕೈಚೆಲ್ಲಿದರು. ಇದರ ಸಂಪೂರ್ಣ ಲಾಭ ಬಳಸಿಕೊಳ್ಳುವಲ್ಲಿ ರಾಜಪಕ್ಸಾ ಯಶಸ್ವಿಯಾದರು ಹಾಗೂ ತಂಡವು 170 ರನ್ ಕಲೆಹಾಕುವಲ್ಲಿ ಮಹತ್ತರ ಪಾತ್ರ ವಹಿಸಿದರು. ಶ್ರೀಲಂಕಾದ ಎಡಗೈ ಬ್ಯಾಟರ್ ರಾಜಪಕ್ಸಾ ಕೇವಲ 45 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
