* ಕೋವಿಡ್‌ನಿಂದ ಚೇತರಿಸಿಕೊಂಡ ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್* ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕೂಡಿಕೊಂಡ ದಿ ವಾಲ್* ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಮೈದಾನ ಆತಿಥ್ಯ

ದುಬೈ(ಆ.28): ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದ್ದು, ಗೆಲುವಿಗಾಗಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾಗೆ ಗುಡ್‌ ನ್ಯೂಸ್‌ ಸಿಕ್ಕಿದ್ದು, ಕೋವಿಡ್‌ನಿಂದ ಗುಣಮುಖರಾಗಿರುವ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ರಾಹುಲ್ ದ್ರಾವಿಡ್‌, ಪಾಕ್‌ ಎದುರಿನ ಪಂದ್ಯಕ್ಕೂ ಮುನ್ನ ತಂಡ ಕೂಡಿಕೊಂಡಿದ್ದಾರೆ.

ಈ ಕುರಿತಂತೆ ಬಿಸಿಸಿಐ ಪ್ರಕಟಣೆ ಹೊರಡಿಸಿದ್ದು, ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಅವರ ಕೋವಿಡ್ ಟೆಸ್ಟ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರು ದುಬೈನಲ್ಲಿ ಭಾರತ ತಂಡ ಕೂಡಿಕೊಂಡಿದ್ದಾರೆ. ಇನ್ನು ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಹಂಗಾಮಿ ಕೋಚ್‌ ಆಗಿ ತಂಡದ ಜತೆಗಿದ್ದ ವಿವಿಎಸ್ ಲಕ್ಷ್ಮಣ್‌, ಬೆಂಗಳೂರಿಗೆ ಬಂದಿಳಿದಿದ್ದು, ಭಾರತ 'ಎ' ತಂಡದ ಸರಣಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಭಾರತ ಕ್ರಿಕೆಟ್‌ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ವಿಮಾನವೇರುವ ಮುನ್ನ ನಡೆಸಲಾದ ಕೋವಿಡ್‌ ಟೆಸ್ಟ್‌ನಲ್ಲಿ ರಾಹುಲ್‌ ದ್ರಾವಿಡ್‌ ಅವರಲ್ಲಿ ಮಂದ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೋವಿಡ್ ಟೆಸ್ಟ್‌ ಕೂಡಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ದ್ರಾವಿಡ್ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಹೀಗಾಗಿ ಹಂಗಾಮಿ ಕೋಚ್ ಆಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರನ್ನು ಭಾರತ ತಂಡದೊಟ್ಟಿಗೆ ಬಿಸಿಸಿಐ ಕಳಿಸಿಕೊಟ್ಟಿತ್ತು.

Asia Cup 2022: ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಫೈಟ್‌..!

ಇದಾದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಟೀಂ ಇಂಡಿಯಾ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್‌ ಅವರಿಗೆ ಮಂದ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು. 

2022ರ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳುವ ಮುನ್ನ ನಡೆಸಲಾದ ಕೋವಿಡ್‌ ಟೆಸ್ಟ್‌ ವೇಳೆ ಟೀಂ ಇಂಡಿಯಾ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಖಚಿತವಾಗಿದೆ. ಸದ್ಯ ರಾಹುಲ್ ದ್ರಾವಿಡ್ ಅವರು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ನಿಗಾದಲ್ಲಿದ್ದು, ಅವರಲ್ಲಿ ಕೊಂಚ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಅವರಿಗೆ ಕೋವಿಡ್ 19 ರಿಪೋರ್ಟ್‌ ನೆಗೆಟಿವ್ ಬಂದ ಬಳಿಕವಷ್ಟೇ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಜಯ್ ಶಾ ಪ್ರಕಟಣೆ ಹೊರಡಿಸಿದ್ದರು.

ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ವಾರಗಳು ಬಾಕಿ ಇದ್ದು, ಭಾರತ ಹಾಗೂ ಪಾಕಿಸ್ತಾನ ತನ್ನ ತಂಡಗಳನ್ನು ಅಂತಿಮಗೊಳಿಸಿಕೊಳ್ಳಲು ಎದುರು ನೋಡುತ್ತಿವೆ. ಹಿಂದಿನ ಸರಣಿಗಳಲ್ಲಿ ವಿಪರೀಪ ಪ್ರಯೋಗಗಳನ್ನು ನಡೆಸಿದ್ದರೂ ಕೆ.ಎಲ್‌.ರಾಹುಲ್‌ ತಂಡಕ್ಕೆ ವಾಪಸಾಗಿರುವ ಕಾರಣ ರೋಹಿತ್‌ ಜೊತೆ ಅವರೇ ಆರಂಭಿಕರಾಗಿ ಆಡಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.