Asia Cup 2022: ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಫೈಟ್..!
ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ - ಪಾಕಿಸ್ತಾನ ತಂಡಗಳು ಮುಖಾಮುಖಿ
ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ
ಟಿ20 ವಿಶ್ವಕಪ್ ಸೋಲಿಗೆ ಪಾಕ್ ಎದುರು ಸೇಡು ತೀರಿಸಿಕೊಳ್ಳುತ್ತಾ ಭಾರತ..?
ದುಬೈ(ಆ.28): ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಟಿ20 ಪಂದ್ಯ ಭಾನುವಾರ ನಡೆಯಲಿದೆ. 10 ತಿಂಗಳ ಹಿಂದೆ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಪಂದ್ಯವನ್ನು ಸೋತಿದ್ದ ಭಾರತ, ಈಗ ಅದೇ ಮೈದಾನದಲ್ಲಿ ಸೇಡು ತೀರಿಸಿಕೊಳ್ಳಲು ಕಾತರಿಸುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ತನ್ನ ಬ್ಯಾಟಿಂಗ್ ಪಡೆ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ಮುಂಚೂಣಿ ವೇಗಿ ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಆಡಬೇಕಿದೆ. ವಿಶ್ವಕಪ್ ಪಂದ್ಯದಲ್ಲಿ ಭಾರತೀಯರನ್ನು ಕಟ್ಟಿಹಾಕಿದ್ದ ಎಡಗೈ ವೇಗಿ ಶಾಹೀನ್ ಅಫ್ರಿದಿ ಅನುಪಸ್ಥಿತಿ ಪಾಕಿಸ್ತಾನವನ್ನು ಬಲವಾಗಿ ಕಾಡಲಿದೆ.
ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ವಾರಗಳು ಬಾಕಿ ಇದ್ದು, ಭಾರತ ಹಾಗೂ ಪಾಕಿಸ್ತಾನ ತನ್ನ ತಂಡಗಳನ್ನು ಅಂತಿಮಗೊಳಿಸಿಕೊಳ್ಳಲು ಎದುರು ನೋಡುತ್ತಿವೆ. ಹಿಂದಿನ ಸರಣಿಗಳಲ್ಲಿ ವಿಪರೀಪ ಪ್ರಯೋಗಗಳನ್ನು ನಡೆಸಿದ್ದರೂ ಕೆ.ಎಲ್.ರಾಹುಲ್ ತಂಡಕ್ಕೆ ವಾಪಸಾಗಿರುವ ಕಾರಣ ರೋಹಿತ್ ಜೊತೆ ಅವರೇ ಆರಂಭಿಕರಾಗಿ ಆಡಲಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದು, ಸ್ಫೋಟಕ ಬ್ಯಾಟರ್‌ಗಳಾದ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ದೊಡ್ಡ ಜವಾಬ್ದಾರಿ ಇರಲಿದೆ. ದಿನೇಶ್ ಕಾರ್ತಿಕ್‌ರನ್ನು ಹಿಂದಿಕ್ಕಿ ರವೀಂದ್ರ ಜಡೇಜಾಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು. ಭುವನೇಶ್ವರ್ ಕುಮಾರ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ಯುವ ವೇಗಿಗಳಾದ ಅಶ್‌ರ್‍ದೀಪ್ ಸಿಂಗ್ ಮತ್ತು ಆವೇಶ್ ಖಾನ್ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಭಾರತದ ಟ್ರಂಪ್ ಕಾರ್ಡ್ ಆಗಬಹುದು.
ಪಾಕ್‌ಗೆ ಅಭ್ಯಾಸ ಕೊರತೆ!: 2022ರಲ್ಲಿ ಪಾಕಿಸ್ತಾನ ಕೇವಲ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದು, ತಂಡದಲ್ಲಿರುವ ಬಹುತೇಕ ಆಟಗಾರರು ಸೂಕ್ತ ಅಭ್ಯಾಸದ ಕೊರತೆ ಎದುರಿಸುತ್ತಿದ್ದಾರೆ. ತಂಡ ತನ್ನ ನಾಯಕ ಹಾಗೂ ಆರಂಭಿಕ ಬ್ಯಾಟರ್ ಬಾಬರ್ ಆಜಂ, ವಿಕೆಟ್ ಕೀಪರ್ ಬ್ಯಾಟರ್ ಮೊಹಮದ್ ರಿಜ್ವಾನ್‌ರನ್ನು ಅತಿಯಾಗಿ ನೆಚ್ಚಿಕೊಂಡಿದೆ. ಅನುಭವಿ ಆಟಗಾರರ ಕೊರತೆ ಸಹ ಪಾಕಿಸ್ತಾನಕ್ಕೆ ಮುಳುವಾಗಬಹುದು.
Asia Cup: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಲೀಕ್!
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ಜಡೇಜಾ/ಕಾರ್ತಿಕ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಅಶ್‌ರ್‍ದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ತಾನ: ಮೊಹಮದ್ ರಿಜ್ವಾನ್, ಬಾಬರ್ ಆಜಂ(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಕುಶ್‌ದಿಲ್ ಶಾ, ಆಸಿಫ್ ಅಲಿ, ಶದಾಬ್ ಖಾನ್, ಮೊಹಮದ್ ನವಾಜ್, ಹಸನ್ ಅಲಿ, ಹ್ಯಾರಿಸ್ ರೌಫ್, ಮೊಹಮದ್ ಹಸ್ನೈನ್.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ದುಬೈ ಪಿಚ್ ಬ್ಯಾಟಿಂಗ್ ಸ್ನೇಹಿ ಎನಿಸಿದರೂ ಆರಂಭಿಕ ಓವರ್‌ಗಳಲ್ಲಿ ರನ್ ಗಳಿಸುವುದು ಕಷ್ಟಎನ್ನುವುದು ಈ ಹಿಂದಿನ ಪಂದ್ಯಗಳಲ್ಲಿ ಕಂಡುಬಂದಿದೆ. ಇಲ್ಲಿ ಸರಾಸರಿ 160ರಿಂದ 170 ರನ್‌ಗಳು ದಾಖಲಾಗಿದ್ದು, ಸ್ವಿಂಗ್ ಬೌಲಿಂಗ್‌ಗೆ ನೆರವು ದೊರೆಯುವ ಸಾಧ್ಯತೆ ಹೆಚ್ಚು. ಮಧ್ಯ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸಬಹುದು. ಇಲ್ಲಿ ಶೇ.80ರಷ್ಟುಪಂದ್ಯಗಳಲ್ಲಿ ಮೊದಲು ಫೀಲ್ಡ್ ಮಾಡಿದ ತಂಡ ಗೆದ್ದಿದೆ.