ಅಂತಿಮ ಆ್ಯಷಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಿವೃತ್ತಿ ಬಗ್ಗೆ ಮೌನ ಮುರಿದ ಜೇಮ್ಸ್ ಆ್ಯಂಡರ್‌ಸನ್..!
ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ 5ನೇ ಆ್ಯಷಸ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಿವೃತ್ತಿ ಕುರಿತಂತೆ ತುಟಿಬಿಚ್ಚಿದ ಆ್ಯಂಡರ್‌ಸನ್
ಕಳೆದ 3 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಕಬಳಿಸಿರುವ ಜೇಮ್ಸ್ ಆ್ಯಂಡರ್‌ಸನ್
ಲಂಡನ್(ಜು.26): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. 5ನೇ ಟೆಸ್ಟ್ ಪಂದ್ಯಕ್ಕೆ ಕೆನ್ನಿಂಗ್ಟನ್ ಓವಲ್ ಮೈದಾನ ಆತಿಥ್ಯ ವಹಿಸಿದೆ. ಈ ಟೆಸ್ಟ್ ಪಂದ್ಯದ ಬಳಿಕ, ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಾ ಬಂದಿರುವ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಈ ವಿಚಾರದ ಕುರಿತಂತೆ ಬಲಗೈ ವೇಗಿ ಆ್ಯಂಡರ್‌ಸನ್, ಮೌನ ಮುರಿದಿದ್ದು, ಗಾಳಿ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.
ಸದ್ಯ ಆಸ್ಟ್ರೇಲಿಯಾ ಎದುರಿನ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಜೇಮ್ಸ್ ಆ್ಯಂಡರ್‌ಸನ್, ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ತಮ್ಮಿಂದ ಮತ್ತಷ್ಟು ವಿಕೆಟ್ ಕಬಳಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಆ್ಯಂಡರ್‌ಸನ್, ತಾವು ಇನ್ನೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದಾಗಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಏಷ್ಯಾದ ಎರಡನೇ ಶ್ರೀಮಂತ ಅಥ್ಲೀಟ್..! ಹಾಗಿದ್ರೆ ಮೊದಲ ಸ್ಥಾನದಲ್ಲಿರೋರು ಯಾರು?
ತಮ್ಮ ಹಿಂದಿನ ಫಾರ್ಮ್ ನೋಡಿ ತಮ್ಮನ್ನು ತಂಡದಿಂದ ಕೈಬಿಡಬೇಕು ಎನ್ನುವ ಚರ್ಚೆ ಆರಂಭವಾಗಿರಬಹುದು. ಇದೀಗ ಅವರ ಕ್ರಿಕೆಟ್ ಭವಿಷ್ಯದ ಕುರಿತಂತೆ ಚರ್ಚೆಗಳು ಜೋರಾಗಿವೆ. 41 ವರ್ಷದ ಜೇಮ್ಸ್ ಆ್ಯಂಡರ್‌ಸನ್, ತಾವು ಎಲ್ಲಿಯವರೆಗೂ ಆಡಲು ಬಯಸುತ್ತೇನೋ ಅಲ್ಲಿಯವರೆಗೂ ತನ್ನನ್ನು ಆಡಿಸಲು ತಂಡದ ಕೋಚ್ ಹಾಗೂ ನಾಯಕ ಸಿದ್ದರಿದ್ದಾರೆ. ಈ ಕುರಿತಂತೆ ನಾನು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. ನಾನು ಈಗಲೂ ಹಿಂದೆಂದಿಗಿಂತಲೂ ಹೆಚ್ಚು ಟೆಸ್ಟ್ ಕ್ರಿಕೆಟ್ ಇಷ್ಟ ಪಡುತ್ತೇನೆ. ನಿವೃತ್ತಿ ಘೋಷಿಸುವುದು ಸದ್ಯಕ್ಕಂತೂ ನನ್ನ ಮನಸ್ಸಿನಲ್ಲಿ ಇಲ್ಲ ಎನ್ನುವುದನ್ನು ಜೇಮ್ಸ್ ಆ್ಯಂಡರ್‌ಸನ್ ಸ್ಪಷ್ಟಪಡಿಸಿದ್ದಾರೆ.
"10-15 ವರ್ಷಗಳ ಹಿಂದೆ ನನ್ನನ್ನು ಆಡಿಸಬೇಕೋ ಅಥವಾ ಬೇಡವೋ ಎನ್ನುವ ಚರ್ಚೆ ನಡೆಯುತ್ತಿತ್ತು. ಇದೀಗ ಓವಲ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯಗಳು ನಡೆಯುವುದರಿಂದ ಇದಾದ ಬಳಿಕ ಮತ್ತೆ ಊಹಾಪೋಹಗಳು ಹರಿದಾಡುತ್ತಿವೆ. ನಾನು ನಿರಂತರವಾಗಿ ಕೋಚ್ ಹಾಗೂ ನಾಯಕನ ಜತೆ ಮಾತುಕತೆ ನಡೆಸಿದ್ದೇನೆ. ಅವರು ನನ್ನನ್ನು ತಂಡದಲ್ಲಿ ಇಟ್ಟುಕೊಳ್ಳಲು ಬಯಸಿದ್ದಾರೆ. ನನ್ನಲ್ಲಿ ಎಲ್ಲಿಯವರೆಗೆ ವಿಕೆಟ್ ಕಬಳಿಸುವ ಹಸಿವು ಇರುತ್ತದೆಯೋ ಅಲ್ಲಿಯವರೆಗೆ ನನ್ನ ಶಕ್ತಿಮೀರಿ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸುತ್ತೇನೆ. ಇದಷ್ಟೇ ಸದ್ಯಕ್ಕೆ ನನ್ನ ಮನಸ್ಸಿನಲ್ಲಿರುವುದು" ಎಂದು ಟೆಲಿಗ್ರಾಫ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಜೇಮ್ಸ್ ಆ್ಯಂಡರ್‌ಸನ್ ತಿಳಿಸಿದ್ದಾರೆ.
World Cup 2023: ಇಂಡೋ-ಪಾಕ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಹೊಸ ದಿನಾಂಕ ನಿಗದಿ?
"ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಆಲೋಚನೆ ಸದ್ಯಕ್ಕಂತೂ ನನ್ನ ಮುಂದಿಲ್ಲ. ಒಂದು ವೇಳೆ ನಿರಂತರ ಬೌಲಿಂಗ್ ಬಳಿಕ ನಾನು ದಣಿಯುತ್ತಿದ್ದರೇ ನಾನು ಬೇರೆಯದ್ದೇ ಆಲೋಚನೆ ಮಾಡುತ್ತಿದ್ದೆನೇನೋ. ಆದರೆ ನನ್ನಲ್ಲಿ ವಿಕೆಟ್ ಕಬಳಿಸುವ ಹಸಿವು ಇನ್ನೂ ಹಾಗೆಯೇ ಇದೆ. ನನ್ನ ಪ್ರಕಾರ ನಾನು ಚೆನ್ನಾಗಿಯೇ ಬೌಲಿಂಗ್ ಮಾಡುತ್ತಿದ್ದೇನೆ. ನಾನು ಈಗಲೂ ಸಹಾ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದೇನೆ. ನಾನು ಓಲ್ಡ್ ಟ್ರಾಫೋರ್ಡ್‌ನಲ್ಲಿಯೂ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದೇನೆ. ಈ ವಾರದಲ್ಲಿ ಮತ್ತೊಮ್ಮೆ ನನಗೆ ಅವಕಾಶ ಸಿಕ್ಕಿದರೆ, ನಾನು ಅದೇ ರೀತಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದೇನೆ, ಈ ಬಾರಿ ನನ್ನ ಅದೃಷ್ಟ ಬದಲಾಗುವ ವಿಶ್ವಾಸದಲ್ಲಿದ್ದೇನೆ ಎಂದು ಜೇಮ್ಸ್ ಆ್ಯಂಡರ್‌ಸನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳ ಅಂತ್ಯದ ವೇಳೆಗೆ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಕೊನೆಯ ಟೆಸ್ಟ್ ಗೆದ್ದು, ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ.