ಆ್ಯಷಸ್‌ ಸರಣಿಯ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ3ನೇ ದಿನದಾಟದಂತ್ಯಕ್ಕೆ 221 ರನ್ ಮುನ್ನಡೆ ಪಡೆದ ಕಾಂಗರೂ ಪಡೆನಾಲ್ಕನೇ ದಿನದಾಟದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ

ಲಂಡನ್‌(ಜು.01): ಆ್ಯಷಸ್‌ ಸರಣಿಯ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ. ಆಸೀಸ್‌ನ 416 ರನ್‌ಗೆ ಉತ್ತರವಾಗಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 325ಕ್ಕೆ ಆಲೌಟಾಯಿತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 130 ರನ್ ಬಾರಿಸಿದ್ದು, ಒಟ್ಟಾರೆ 221 ರನ್‌ಗಳ ಮುನ್ನಡೆ ಗಳಿಸಿದೆ.

ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಷಸ್‌ ಸರಣಿಯ 2ನೇ ಟೆಸ್ಟ್‌ನಲ್ಲಿ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 278 ರನ್‌ ಗಳಿಸಿದ್ದ ಇಂಗ್ಲೆಂಡ್‌, 3ನೇ ದಿನವಾದ ಶುಕ್ರವಾರ 47 ರನ್‌ಗೆ ಕೊನೆಯ 6 ವಿಕೆಟ್‌ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಹಾಗೂ ಟ್ರಾವಿಸ್ ಹೆಡ್ ಮಾರಕ ದಾಳಿಗೆ ಇಂಗ್ಲೆಂಡ್ ಬ್ಯಾಟರ್‌ಗಳು ತತ್ತರಿಸಿ ಹೋದರು. ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ 50 ರನ್ ಬಾರಿಸಿದರು. ಇದಾದ ಬಳಿಕ ಇಂಗ್ಲೆಂಡ್ ಕೆಳ ಕ್ರಮಾಂಕದ ಯಾವೊಬ್ಬ ಬ್ಯಾಟರ್‌ ಕೂಡಾ ಕನಿಷ್ಠ 20 ರನ್ ಬಾರಿಸಲು ಸಫಲವಾಗಲಿಲ್ಲ. 

Scroll to load tweet…

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್‌ 3 ವಿಕೆಟ್ ಪಡೆದರೆ, ಜೋಶ್ ಹೇಜಲ್‌ವುಡ್ ಹಾಗೂ ಟ್ರಾವಿಸ್ ಹೆಡ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಇನ್ನು ನಾಯಕ ಪ್ಯಾಟ್ ಕಮಿನ್ಸ್‌, ನೇಥನ್ ಲಯನ್ ಮತ್ತು ಕ್ಯಾಮರೋನ್ ಗ್ರೀನ್ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು.

Ashes 2023: ಆಸ್ಟ್ರೇಲಿಯಾಗೆ ತಿರುಗೇಟು ನೀಡುವತ್ತ ಇಂಗ್ಲೆಂಡ್ ದಿಟ್ಟ ಹೆಜ್ಜೆ

ಇನ್ನು 91 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 130 ರನ್‌ ಗಳಿಸಿದ್ದು, 221 ರನ್‌ ಮುನ್ನಡೆಯಲ್ಲಿದೆ. ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮಾರ್ನಸ್ ಲಬುಶೇನ್ ಬ್ಯಾಟಿಂಗ್ 30 ರನ್‌ಗಳಿಗೆ ಸೀಮಿತವಾಯಿತು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ(58*) ಹಾಗೂ ಸ್ಟೀವ್ ಸ್ಮಿತ್(6) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆ್ಯಷಸ್‌ ಸರಣಿಯಿಂದ ನೇಥನ್‌ ಲಯನ್ ಔಟ್?

ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯನ್, ಇದೀಗ ಸರಣಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಗುರುವಾರ ಇಂಗ್ಲೆಂಡ್ ಎದುರು ಫೀಲ್ಡಿಂಗ್ ಮಾಡುವ ವೇಳೆ ಮೀನಖಂಡ ಸೆಳೆತಕ್ಕೆ ಒಳಗಾಗಿದ್ದರು. ನೇಥನ್ ಲಯನ್, ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

ದುಲೀಪ್‌ ಟ್ರೋಫಿ :ಗೆಲುವಿನತ್ತ ಕೇಂದ್ರ, ಉತ್ತರ ವಲಯ

ಬೆಂಗಳೂರು: ದುಲೀಪ್‌ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಕೇಂದ್ರ ವಲಯ ತಂಡ ಪೂರ್ವ ವಲಯದ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 60 ರನ್‌ ಮುನ್ನಡೆ ಸಾಧಿಸಿದ್ದ ಕೇಂದ್ರ ವಲಯ ಶುಕ್ರವಾರ 2ನೇ ಇನ್ನಿಂಗ್ಸ್‌ನಲ್ಲಿ 239ಕ್ಕೆ ಆಲೌಟಾಯಿತು. ಇದರೊಂದಿಗೆ ಗೆಲುವಿಗೆ 300 ರನ್‌ ಗುರಿ ಪಡೆದ ಪೂರ್ವ ವಲಯ 3ನೇ ದಿನದಂತ್ಯಕ್ಕೆ 69ಕ್ಕೆ 6 ವಿಕೆಟ್‌ ಕಳೆದುಕೊಂಡಿದ್ದು, ಇನ್ನೂ 231 ರನ್‌ ಹಿನ್ನಡೆಯಲ್ಲಿದೆ. ಸೌರಭ್‌ ಕುಮಾರ್‌ 33ಕ್ಕೆ 4 ವಿಕೆಟ್‌ ಪಡೆದರು.

ಬೃಹತ್‌ ಜಯದತ್ತ ಉತ್ತರ

ಮತ್ತೊಂದು ಕ್ವಾರ್ಟರ್‌ನಲ್ಲಿ ಈಶಾನ್ಯ ವಲಯದ ವಿರುದ್ಧ ಉತ್ತರ ವಲಯ ಬೃಹತ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಉತ್ತರ ವಲಯ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 259 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡು, ಈಶಾನ್ಯಕ್ಕೆ 666 ರನ್‌ಗಳ ಗುರಿ ನಿಗದಿಪಡಿಸಿತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 134ಕ್ಕೆ ಸರ್ವಪತನ ಕಂಡಿದ್ದ ಈಶಾನ್ಯ ಮತ್ತೆ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 3ನೇ ದಿನದಂತ್ಯಕ್ಕೆ 58ಕ್ಕೆ 3 ವಿಕೆಟ್‌ ಕಳೆದುಕೊಂಡಿದೆ. ತಂಡ ಗೆಲುವಿಗೆ ಇನ್ನೂ 608 ರನ್‌ ಗಳಿಸಬೇಕಿದೆ.