Ashes 2023: ಆಸ್ಟ್ರೇಲಿಯಾಗೆ ತಿರುಗೇಟು ನೀಡುವತ್ತ ಇಂಗ್ಲೆಂಡ್ ದಿಟ್ಟ ಹೆಜ್ಜೆ
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ ಜಿದ್ದಾಜಿದ್ದಿನ ಫೈಟ್
ಆಸ್ಟ್ರೇಲಿಯಾಗೆ ತಿರುಗೇಟು ನೀಡುತ್ತಿರುವ ಬೆನ್ ಸ್ಟೋಕ್ಸ್ ಪಡೆ
ಇನ್ನೂ 138 ರನ್ ಹಿನ್ನಡೆಯಲ್ಲಿರುವ ಆತಿಥೇಯ ಇಂಗ್ಲೆಂಡ್
ಲಂಡನ್(ಜೂ.30): ಆ್ಯಷಸ್ ಸರಣಿಯ 2ನೇ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 339 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ 2ನೇ ದಿನವಾದ ಗುರುವಾರ ಆ ಮೊತ್ತಕ್ಕೆ 77 ರನ್ ಸೇರಿಸಿ 416 ರನ್‌ಗೆ ಆಲೌಟ್ ಆಯಿತು.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಮಾಜಿ ನಾಯಕ ಸ್ಟೀವ್ ಸ್ಮಿತ್ 184 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 110 ರನ್ ಗಳಿಸಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ದಿಢೀರ್ ಕುರಿತ ಕಂಡಿತು. ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕೇರಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮಿಚೆಲ್ ಸ್ಟಾರ್ಕ್ 6 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಕೊನೆಯಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅಜೇಯ 22 ರನ್ ಬಾರಿಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ತಂಡವು ಅಂತಿಮವಾಗಿ ಮೊದಲ ಇನಿಂಗ್ಸ್‌ನಲ್ಲಿ 100.4 ಓವರ್ ಬ್ಯಾಟಿಂಗ್ ಮಾಡಿ 416 ರನ್ ಗಳಿಸಿ ಸರ್ವಪತನ ಕಂಡಿತು.
ಇಂಗ್ಲೆಂಡ್ ತಂಡದ ಪರ ಮೊದಲ ಬಾರಿಗೆ ಆ್ಯಷಸ್ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜೋಶ್ ಟಂಗ್ 98 ರನ್ ನೀಡಿ 3 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಓಲಿ ರಾಬಿನ್‌ಸನ್ 100 ರನ್ ನೀಡಿ 3 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು. ಇನ್ನು ಹಂಗಾಮಿ ಸ್ಪಿನ್ನರ್ ಜೋ ರೂಟ್ ಎರಡು ಮತ್ತು ಅನುಭವಿ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್‌ಸನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮೊದಲ ವಿಕೆಟ್‌ಗೆ 91 ರನ್ ಜೊತೆಯಾಟ ಪಡೆಯಿತು. ಜಾಕ್ ಕ್ರಾಲಿ 48 ಎಸೆತಗಳನ್ನು ಎದುರಿಸಿ 100ರ ಸ್ಟ್ರೈಕ್‌ರೇಟ್‌ನಲ್ಲಿ 48 ರನ್ ಗಳಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ ಯಶಸ್ವಿಯಾದರು. ಜಾಕ್ ಕ್ರಾಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಜಾನಿ ಬೇರ್‌ಸ್ಟೋವ್ ಅದ್ಬುತ ಕೀಪಿಂಗ್ ಕೈಚಳಕಕ್ಕೆ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಬೆನ್ ಡಕೆಟ್ 98 ರನ್‌ಗೆ ಔಟಾಗಿ ಶತಕ ವಂಚಿತರಾದರೆ, ಓಲಿ ಪೋಪ್ 42 ರನ್ ಗಳಿಸಿದರು.
ವಿರಾಟ್ ಕೊಹ್ಲಿ-ಬಾಬರ್ ಅಜಂ ಹುಟ್ಟುಹಬ್ಬದ ದಿನ ಮಹತ್ವದ ಪಂದ್ಯಗಳು..! ಗೆಲುವಿನ ಸಿಹಿ ಯಾರಿಗೆ?
ಇಂಗ್ಲೆಂಡ್ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ 61 ಓವರಲ್ಲಿ 4 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್ ತಂಡವು ಇನ್ನೂ 138 ರನ್‌ಗಳ ಹಿನ್ನಡೆಯಲ್ಲಿದೆ. ನಾಯಕ ಬೆನ್ ಸ್ಟೋಕ್ಸ್(17) ಹಾಗೂ ಹ್ಯಾರಿ ಬ್ರೂಕ್ 45 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟಲ್ಲಿ ಸ್ಟೀವ್ ಸ್ಮಿತ್ 32ನೇ ಶತಕ!
ಲಂಡನ್: ಆಸ್ಟ್ರೇಲಿಯಾದ ‘ರನ್ ಮಷಿನ್’ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 32ನೇ ಶತಕ ಪೂರೈಸಿದ್ದು, ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ 8ನೇ ಸ್ಥಾನಕ್ಕೇರಿದ್ದಾರೆ. ಗುರುವಾರ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವರು ಶತಕ ದಾಖಲಿಸಿದರು. ಸ್ಟೀವ್ ವಾ ಅವರ 32 ಶತಕಗಳ ದಾಖಲೆಯನ್ನು ಸ್ಮಿತ್ ಸರಿಗಟ್ಟಿದ್ದು ಇನ್ನೊಂದು ಶತಕ ಬಾರಿಸಿದರೆ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್ ಕುಕ್ ಜೊತೆ ಸಮಬಲ ಸಾಧಿಸಲಿದ್ದಾರೆ. ಆಸೀಸ್ ಆಟಗಾರರ ಪೈಕಿ ಸದ್ಯ 2ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್(41 ಶತಕ)ರನ್ನು ಹಿಂದಿಕ್ಕಲು ಇನ್ನೂ 10 ಶತಕ ಬಾರಿಸಬೇಕಿದೆ.