IPL 2024: ಆರ್ಶ್‌ದೀಪ್ ಸಿಂಗ್ ಬೌಲಿಂಗ್ ಮ್ಯಾಜಿಕ್, ಸನ್ ಸಖತ್ ಬ್ಯಾಟಿಂಗ್
ಆರ್ಶ್‌ದೀಪ್ ಸಿಂಗ್ ಭರ್ಜರಿ ಬೌಲಿಂಗ್ ಮುಂದೆ ಪರದಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೊನೇ ಓವರ್‌ಗಳಲ್ಲಿ ಶಾಬಾಜ್ ಅಹ್ಮದ್ ಕೆಲ ರನ್ ಬಾರಿಸಿದ್ದರಿಂದ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ ಸವಾಲಿನ ಮೊತ್ತದ ಗುರಿ ನೀಡಿದೆ.
ಮೊಹಾಲಿ (ಏ.9): ತಂಡದ ಅಗ್ರ ಬೌಲರ್ ಆರ್ಶ್‌ದೀಪ್ ಸಿಂಗ್ ಮಿಂಚಿನ ದಾಳಿಯ ನಡುವೆಯೂ ಹೋರಾಟದ ಆಟವಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸವಾಲಿನ ಮೊತ್ತದ ಗುರಿ ನೀಡಿದೆ. ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಮಿಂಚಲು ವಿಫಲವಾದ ನಡುವೆಯೂ ಸನ್‌ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್‌ಗೆ 182 ರನ್ ಬಾರಿಸಲು ಯಶಸ್ವಿಯಾಗಿದೆ.ಸನ್ ರೈಸರ್ಸ್ ತಂಡದ ಪರವಾಗಿ ಬ್ಯಾಟಿಂಗ್‌ನಲ್ಲಿ ಮಿಂಚಿದ ನಿತೀಶ್ ರೆಡ್ಡಿ ಕೇವಲ 37 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಯೊಂದಿಗೆ 64 ರನ್ ಬಾರಿಸುವ ಮೂಲಕ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಆದರೆ, ಹಿಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್‌ನ ಶಕ್ತಿಯಾಗಿ ನಿಂತಿದ್ದ ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮ, ಟ್ರಾವಿಸ್ ಹೆಡ್ ಈ ಬಾರಿ ಸಂಪೂರ್ಣವಾಗಿ ವಿಫಲರಾದರು.
ಮೊಹಾಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ತಂಡಕ್ಕೆ ಅದೃಷ್ಟ ಕೈಹಿಡಿದಿತ್ತು. ಮೊದಲ ಓವರ್‌ನಲ್ಲಿಯೇ ಟ್ರಾವಿಸ್ ಹೆಡ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟಾಗಿದ್ದರೂ, ಪಂಜಾಬ್ ತಂಡ ಡಿಆರ್‌ಎಸ್‌ನಲ್ಲಿ ಪ್ರಶ್ನೆ ಮಾಡದ ಕಾರಣ ಜೀವದಾನ ಪಡೆದುಕೊಂಡಿದ್ದರು. ಆದರೆ, ಇದು ಟ್ರಾವಿಸ್ ಹೆಡ್‌ಗೆ ಹೆಚ್ಚಿನ ಲಾಭವೇನೂ ತಂದುಕೊಡಲಿಲ್ಲ. 15 ಎಸೆತಗಳಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 21 ರನ್ ಬಾರಿಸಿದ್ದ ಟ್ರಾವಿಸ್ ಹೆಡ್, 4ನೇ ಓವರ್‌ನಲ್ಲಿ ಆರ್ಶ್‌ದೀಪ್ ಸಿಂಗ್ ಅವರ ಮೊದಲ ವಿಕೆಟ್ ಆಗಿ ನಿರ್ಗಮಿಸಿದರು. ಇದೇ ಮೊತ್ತಕ್ಕೆ ಏಡೆನ್ ಮಾರ್ಕ್ರಮ್ ಕೂಡ ಶೂನ್ಯಕ್ಕೆ ಔಟಾದಾಗ ಸನ್ ರೈಸರ್ಸ್ ತಂಡ ಅಘಾತ ಕಂಡಿತ್ತು.
ಈ ಮೊತ್ತಕ್ಕೆ 12 ರನ್ ಸೇರಿಸುವ ವೇಳೆಗೆ ಅದ್ಭುತ ಫಾರ್ಮ್‌ನಲ್ಲಿರುವ ಇನ್ನೊಬ್ಬ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮ ಕೂಡ ಔಟಾಗಿದ್ದರು. ಈ ಹಂತದಲ್ಲಿ ಯುವ ಆಟಗಾರ ನಿತೀಶ್ ರೆಡ್ಡಿ ಆಡಿದ ಇನ್ನಿಂಗ್ಸ್ ತಂಡಕ್ಕೆ ಚೇತರಿಕೆ ನೀಡಿತು. ರಾಹುಲ್ ತ್ರಿಪಾಠಿ (11) ಹೆಚ್ಚಿನ ಕೊಡುಗೆ ನೀಡಲು ವಿಫಲವಾದರೆ, ಹೆನ್ರಿಚ್ ಕ್ಲಾಸೆನ್ 9 ಎಸೆತಗಳಲ್ಲಿ 9 ರನ್ ಸಿಡಿಸಿ ಔಟಾದಾಗ ಸನ್‌ರೈಸರ್ಸ್ ತಂಡದ ಮೊತ್ತ 100 ರನ್ ಆಗಿದ್ದವು. ಸಾಧಾರಣ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ವೇಳೆ ಆಸರೆಯಾದ ಅಬ್ದುಲ್ ಸಮದ್ ಕೇವಲ 12 ಎಸೆತಗಳಲ್ಲಿ 5 ಬೌಂಡರಿಗಳಿದ್ದ 25 ರನ್ ಸಿಡಿಸಿ ತಂಡದ ಪಾಲಿಗೆ ಆಪದ್ಭಾಂದವರೆನಿಸಿದ್ದರು.
ತಂಡದ ಮೊತ್ತ 150ರ ಗಡಿ ಮುಟ್ಟಿಸಿ ಅಬ್ದುಲ್ ಸಮದ್ ಔಟಾದ ಬಳಿಕ, ಶಾಬಾಜ್ ಅಹ್ಮದ್ (14), ಭುವನೇಶ್ವರ್ ಕುಮಾರ್ ಹಾಗೂ ಜೈದೇವ್ ಉನಾದ್ಕತ್ ಕೆಲ ಉಪಯುಕ್ತ ರನ್ ಬಾರಿಸಿದ್ದರಿಂದ ತಂಡದ ಮೊತ್ತ 180ರ ಗಡಿ ದಾಟಿತು. ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆರ್ಶ್‌ದೀಪ್ ಸಿಂಗ್ 29 ರನ್ ನೀಡಿ 4 ವಿಕೆಟ್ ಉರುಳಿಸಿದರು.ಸ್ಯಾಮ್ ಕರ್ರನ್ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದರೆ, ಕಗೀಸೋ ರಬಾಡ ಒಂದು ವಿಕೆಟ್ ಪಡೆದುಕೊಂಡಿದ್ದರು.
ಪ್ರೀತಿಯ ಮಡದಿಗಾಗಿ ದಿಢೀರ್ ನಿವೃತ್ತಿ ತಗೊಂಡ್ರಾ ಧೋನಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ