ಪಂಜಾಬ್ ಕಿಂಗ್ಸ್ ವೇಗಿ ಅರ್ಶ್‌ದೀಪ್ ಸಿಂಗ್, ಐಪಿಎಲ್ 2026ರ ಕಳಪೆ ಪ್ರದರ್ಶನದ ನಂತರ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ವಿರಾಟ್ ಕೊಹ್ಲಿ ಜೊತೆಗಿನ ವೈರಲ್ ವಿಡಿಯೋ ಸೇರಿದಂತೆ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ದಿಢೀರ್ ಅಳಿಸಿಹಾಕಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.
ಮುಂಬೈ (ಮೇ.26): ಐಪಿಎಲ್ 2026ರ ಟೂರ್ನಿಯುದ್ದಕ್ಕೂ ವಿಭಿನ್ನ ಕಾರಣಗಳಿಗಾಗಿ ಸುದ್ದಿಯಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್, ಈಗ ಮತ್ತೊಮ್ಮೆ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಯ ವಿಷಯವಾಗಿದ್ದಾರೆ. ಈ ಬಾರಿ ಅವರು ಯಾವುದೇ ನಿರ್ವಹಣೆಯ ಬದಲಿಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಬರೋಬ್ಬರಿ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ದಿಢೀರ್ ಆಗಿ ಡಿಲೀಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಪ್ರಸಕ್ತ ಐಪಿಎಲ್ 2026ರ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪಯಣ ಲೀಗ್ ಹಂತದಲ್ಲೇ ಕೊನೆಗೊಂಡಿದೆ. ಟೂರ್ನಿಯ ಆರಂಭದಲ್ಲಿ ಪಂಜಾಬ್ ಉತ್ತಮ ಪ್ರದರ್ಶನ ನೀಡಿದ್ದರೂ, ನಂತರದ ಪಂದ್ಯಗಳಲ್ಲಿ ಸರಣಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. ಪಂಜಾಬ್ ಕಿಂಗ್ಸ್ ಹೊರಬಿದ್ದಿದ್ದರೂ ಅರ್ಶ್‌ದೀಪ್ ಸಿಂಗ್ ಅವರ ಸುತ್ತಲಿನ ಚರ್ಚೆಗಳು ಮಾತ್ರ ನಿಂತಿಲ್ಲ. ಐಪಿಎಲ್ ಆರಂಭದಿಂದಲೂ ಅವರು ಯಾವುದೋ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದರು. ಇತ್ತೀಚೆಗಷ್ಟೇ ಅವರ ಗರ್ಲ್‌ಫ್ರೆಂಡ್ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಅವರು ಇನ್‌ಸ್ಟಾಗ್ರಾಮ್‌ನಿಂದ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಲ್ಲದೆ, ತಮ್ಮ ಪ್ರೊಫೈಲ್ ಚಿತ್ರವನ್ನು (DP) ಸಹ ಬದಲಾಯಿಸಿದ್ದಾರೆ.
ಪೋಸ್ಟ್‌ಗಳನ್ನು ಡಿಲೀಟ್ ಮಾಡಲು ಅಸಲಿ ಕಾರಣವೇನು?:
ಮೇ 25ರ ರಾತ್ರಿ ಅರ್ಶ್‌ದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಭಾರಿ 'ಸ್ವಚ್ಛತಾ ಕಾರ್ಯ' ನಡೆಸಿದ್ದಾರೆ. ಪರಿಣಾಮವಾಗಿ, ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಸಂಖ್ಯೆ ಈಗ ಕೇವಲ 40ಕ್ಕೆ ಕುಸಿದಿದೆ. ಅವರು ಡಿಲೀಟ್ ಮಾಡಿರುವ ಪೋಸ್ಟ್‌ಗಳಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ವೈರಲ್ ಆಗಿದ್ದ ಪೋಸ್ಟ್ ಹಾಗೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪೋಸ್ಟ್‌ಗಳು ಸೇರಿವೆ.
ಅರ್ಶ್‌ದೀಪ್ ಈ ನಿರ್ಧಾರ ತೆಗೆದುಕೊಳ್ಳಲು ನಿಖರ ಕಾರಣ ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ ಮತ್ತು ಈ ಬಗ್ಗೆ ಅವರು ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಭಾರಿ ಗೊಂದಲ ಮೂಡಿಸಿದ್ದು, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಊಹೆಗಳನ್ನು ಮಾಡಲು ಶುರು ಮಾಡಿದ್ದಾರೆ. ಕೆಲವು ಅಭಿಮಾನಿಗಳ ಪ್ರಕಾರ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಬಳಕೆಯ ವಿಷಯದಲ್ಲಿ ಬಿಸಿಸಿಐ (BCCI) ಕಠಿಣ ನಿಲುವನ್ನು ತಳೆದಿರುವುದು ಇದಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ. ಇನ್ನು ಕೆಲವರು ಇದು ಅವರ ವೈಯಕ್ತಿಕ ಕಾರಣ ಇರಬಹುದು ಎನ್ನುತ್ತಿದ್ದರೆ, ಮತ್ತೆ ಕೆಲವರು ತೆರೆಮರೆಯಲ್ಲಿ ದೊಡ್ಡದೇನೋ ನಡೆದಿದೆ ಎಂದು ಅಂದಾಜಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತಿಲಕ್ ವರ್ಮಾ ಅವರ ಕುರಿತು ನೀಡಿದ್ದ ಹೇಳಿಕೆಯಿಂದಾಗಿ ಅರ್ಶ್‌ದೀಪ್ ಭಾರಿ ಟ್ರೋಲ್‌ಗೆ ಒಳಗಾಗಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
ಕೊಹ್ಲಿ ಜೊತೆಗಿನ ಆ ವೈರಲ್ ವಿಡಿಯೋ ಕೂಡ ಮಾಯ!
ಚಾಂಪಿಯನ್ಸ್ ಟ್ರೋಫಿ 2025ರ ಅವಧಿಯಲ್ಲಿ ಅರ್ಶ್‌ದೀಪ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಶತಕಕ್ಕೆ (Centuries) ಸಂಬಂಧಿಸಿದಂತೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಅದಕ್ಕೆ ವಿರಾಟ್ ಕೊಹ್ಲಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕೌಂಟರ್ ಉತ್ತರ ನೀಡುವ ಮೂಲಕ ಅರ್ಶ್‌ದೀಪ್ ಅವರ ಕಾಲೆಳೆದಿದ್ದರು. ಈ ವಿಡಿಯೋ ಬರೋಬ್ಬರಿ 150 ಮಿಲಿಯನ್ ಪ್ಲಸ್ (15 ಕೋಟಿಗೂ ಹೆಚ್ಚು) ವೀಕ್ಷಣೆಗಳನ್ನು (Views) ಪಡೆದು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿತ್ತು. ಈಗ ಅರ್ಶ್‌ದೀಪ್ ಡಿಲೀಟ್ ಮಾಡಿರುವ ಪೋಸ್ಟ್‌ಗಳಲ್ಲಿ ಈ ವಿಡಿಯೋ ಕೂಡ ಸೇರಿದೆ. ಇದರೊಂದಿಗೆ ಪಂಜಾಬ್ ಕಿಂಗ್ಸ್‌ಗೆ ಸಂಬಂಧಿಸಿದ ಹಲವು ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದ್ದರೂ, ಇನ್ನು ಕೆಲವು ಪೋಸ್ಟ್‌ಗಳು ಅವರ ಖಾತೆಯಲ್ಲಿ ಹಾಗೇ ಉಳಿದುಕೊಂಡಿವೆ.
ಐಪಿಎಲ್ 2026ರಲ್ಲಿ ಅರ್ಶ್‌ದೀಪ್ ಕಳಪೆ ಪ್ರದರ್ಶನ
ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಅವರು ಬರೋಬ್ಬರಿ 541 ರನ್‌ಗಳನ್ನು ಬಿಟ್ಟುಕೊಟ್ಟು, ಕೇವಲ 14 ವಿಕೆಟ್‌ಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ. ಈ ಟೂರ್ನಿಯಲ್ಲಿ ಅವರ ಎಕಾನಮಿ ರೇಟ್ 10.21 ರಷ್ಟಿದ್ದು, ಇದು ಅತ್ಯಂತ ದುಬಾರಿಯಾಗಿದೆ. ಅವರ ಈ ಕಳಪೆ ಬೌಲಿಂಗ್ ಪ್ರದರ್ಶನ ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾರಿ ಪೆಟ್ಟು ನೀಡಿತು. ಒಂದು ಆಸಕ್ತಿದಾಯಕ ಅಂಕಿ-ಅಂಶದ ಪ್ರಕಾರ, ಪಂಜಾಬ್ ಕಿಂಗ್ಸ್ ಪರ ಬ್ಯಾಟಿಂಗ್‌ನಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ 14 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ಅಂದರೆ 510 ರನ್ ಗಳಿಸಿದ್ದರು. ಆದರೆ, ಪಂಜಾಬ್‌ನ ಬ್ಯಾಟರ್ ಗಳಿಸಿದ ಒಟ್ಟು ರನ್‌ಗಿಂತಲೂ ಹೆಚ್ಚು ರನ್‌ಗಳನ್ನು ಬೌಲರ್ ಅರ್ಶ್‌ದೀಪ್ ಸಿಂಗ್ (541 ರನ್) ಎದುರಾಳಿ ತಂಡಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.


