ಐಪಿಎಲ್ 2026ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಸೆಣಸಾಡಲಿವೆ. ಪಂದ್ಯಕ್ಕೂ ಮುನ್ನ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ತಮ್ಮ ತಂಡ ಒತ್ತಡವನ್ನು ಮೆಟ್ಟಿ ನಿಲ್ಲಲು ಸಿದ್ಧವಾಗಿದೆ ಎಂದು ಗುಜರಾತ್‌ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೌಲಿಂಗ್ ವಿಭಾಗವೇ ತಂಡದ ಪ್ರಮುಖ ಅಸ್ತ್ರ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಧರ್ಮಶಾಲಾ: 2026ರ ಐಪಿಎಲ್ ಟೂರ್ನಿಯಲ್ಲಿಂದು ಕ್ವಾಲಿಫೈಯರ್-1 ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಫೈನಲ್ ಟಿಕೆಟ್‌ಗಾಗಿ ಸೆಣಸಾಡಲಿವೆ. ಈ ಹೈವೋಲ್ಟೇಜ್ ಮ್ಯಾಚ್‌ಗೆ ಇಲ್ಲಿನ HPCA ಸ್ಟೇಡಿಯಂ ಆತಿಥ್ಯ ವಹಿಸಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್, ಕ್ವಾಲಿಫೈಯರ್-1 ಪಂದ್ಯಕ್ಕೂ ಮೊದಲೇ ಗುಜರಾತ್ ಟೈಟಾನ್ಸ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ಎದುರಿನ ಕ್ವಾಲಿಫೈಯರ್-1 ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ದಿಟ್ಟ ಪ್ರದರ್ಶನ ತೋರಲಿದ್ದು, ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕದಾದ ಆಟವಾಡಲು ರೆಡಿಯಾಗಿದೆ ಎಂದು ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಈ ಮೊದಲು ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಆರ್‌ಸಿಬಿ ತವರಿನಲ್ಲಿ ಗುಜರಾತ್ ಟೈಟಾನ್ಸ್ ಎದುರು 5 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು. ಇನ್ನೊಂದೆಡೆ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ, ಆರ್‌ಸಿಬಿ ಎದುರು ಸೇಡು ತೀರಿಸಿಕೊಂಡಿತ್ತು.
ಗುಜರಾತ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಪಾಟೀದಾರ್
ಗುಜರಾತ್ ಟೈಟಾನ್ಸ್ ಎದುರಿನ ಕ್ವಾಲಿಫೈಯರ್-1 ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ರಜತ್ ಪಾಟೀದಾರ್, 'ಎರಡು ತಂಡಗಳು ಟೂರ್ನಿಯುದ್ದಕ್ಕೂ ಅದ್ಭುತ ಆಟವನ್ನು ಪ್ರದರ್ಶಿಸಿವೆ. ಇದೀಗ ಮ್ಯಾಚ್ ನಡೆಯುವ ದಿನ ಯಾವ ತಂಡವು ತನ್ನ ಪ್ಲಾನ್ ಸರಿಯಾಗಿ ಕಾರ್ಯಗತಗೊಳಿಸುತ್ತೋ, ಒತ್ತಡದ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸುತ್ತೋ ಆ ತಂಡ ಗೆಲ್ಲುತ್ತದೆ' ಎಂದು ಹೇಳಿದ್ದಾರೆ.
'ಕ್ವಾಲಿಫೈಯರ್-1 ಪಂದ್ಯವು ಒಂದು ದೊಡ್ಡ ವೇದಿಕೆ. ನಾವು ಈ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ರೆಡಿಯಾಗಿದ್ದೇವೆ' ಎಂದು ರಜತ್ ಪಾಟೀದಾರ್ ಹೇಳಿದ್ದಾರೆ.
ತಂಡದ ಬಲ ಬೌಲಿಂಗ್ ಎಂದ ಆರ್‌ಸಿಬಿ ನಾಯಕ
ನಮ್ಮ ತಂಡದ ಬಲವೇ ಬೌಲಿಂಗ್ ವಿಭಾಗ. ಪವರ್‌ಪ್ಲೇನಲ್ಲಿ ನಮ್ಮ ಬೌಲರ್‌ಗಳ ಪ್ರದರ್ಶನ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಪಾಟೀದಾರ್ ಒತ್ತಿ ಹೇಳಿದ್ದಾರೆ. ತಂಡದಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ ನಾವು ಈ ಸಲ ಟ್ರೋಫಿ ಉಳಿಸಿಕೊಳ್ಳಲು ಹೋರಾಡುತ್ತಿಲ್ಲ, ಬದಲಾಗಿ ಆಕ್ರಮಣಕಾರಿ ಆಟದ ಮನೋಭಾವ ಹೊಂದಿದ್ದೇವೆ. ನಾವು ಆರಂಭದಲ್ಲೇ ಎದುರಾಳಿ ಪಡೆಯ ವಿಕೆಟ್ ಕಬಳಿಸಲು ಎದುರು ನೋಡುತ್ತಿದ್ದೇವೆ. ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಹಾಗೂ ರಸಿಕ್ ಸಲಂ ಧರ್ ಇಲ್ಲಿಯವರೆಗೆ ತೋರಿದ ಪ್ರದರ್ಶನವನ್ನೇ ಮುಂದುವರೆಸಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಆರ್‌ಸಿಬಿ ನಾಯಕ ಹೇಳಿದ್ದಾರೆ.
'ನಾಯಕನಾಗಿ ನಾನು ಸಾಕಷ್ಟು ಐಡಿಯಾಗಳನ್ನು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್ ಹಾಗೂ ಟಿಮ್ ಡೇವಿಡ್ ಅವರಿಂದ ಪಡೆದುಕೊಳ್ಳುತ್ತಿದ್ದೇನೆ. ಅವರ ಐಡಿಯಾ ಹಾಗೂ ಅನುಭವ ನನಗೆ ತುಂಬಾನೆ ಅನುಕೂಲವಾಗುತ್ತಿವೆ. ನಾನು ಎಲ್ಲರ ಜತೆಯೂ ಮುಕ್ತವಾಗಿ ಮಾತನಾಡುತ್ತೇನೆ. ಎಂತಹ ಒತ್ತಡದ ಸಂದರ್ಭದಲ್ಲೂ ತಾಳ್ಮೆಯಿಂದಿರುವುದು ನನ್ನ ಬಲ ಎಂದು ರಜತ್ ಪಾಟೀದಾರ್ ಹೇಳಿದ್ದಾರೆ.

