IPL 2023 ಎಂ ಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕ ಅರಿಜಿತ್ ಸಿಂಗ್; ಧೋನಿ ಗಳಿಸಿದ್ದು ಇದೇ ಅಲ್ವಾ?
16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ದೂರಿ ಚಾಲನೆ
ಉದ್ಘಾಟನಾ ಸಮಾರಂಭದ ವೇಳೆ ಧೋನಿಗೆ ಕಾಲುಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್
ಅರಿಜಿತ್ ಸಿಂಗ್, ಬಾಲಿವುಡ್‌ನ ಪ್ರಖ್ಯಾತ ಗಾಯಕ
ಅಹಮದಾಬಾದ್(ಏ.01): ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ದೇಶಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಜಗತ್ತಿನ ಏಕೈಕ ನಾಯಕ ಎನ್ನುವ ಹಿರಿಮೆ ಹೊಂದಿರುವ ಧೋನಿಗೆ ಎಲ್ಲಾ ವಯೋಮಾನದ ಅಭಿಮಾನಿಗಳಿದ್ದಾರೆ. ಇನ್ನು ಖ್ಯಾತ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಉದ್ಘಾಟನಾ ಕಾರ್ಯಕ್ರಮದ ವೇಳೆಗೆ ಅರಿಜಿತ್ ಸಿಂಗ್, ಧೋನಿಯ ಪಾದಮುಟ್ಟಿ ನಮಸ್ಕರಿಸುವ ಮೂಲಕ ದಿಗ್ಗಜ ಕ್ರಿಕೆಟಿಗನಿಗೆ ಗೌರವ ಸೂಚಿಸಿದ್ದರು. ಆ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಧೋನಿ ಕಾಲಿಗೆರಗಿದ ಅರಿಜಿತ್!
ಎಂ.ಎಸ್.ಧೋನಿ ವೇದಿಕೆಗೆ ಆಗಮಿಸುತ್ತಿದ್ದಂತೆ ಗಾಯಕ ಅರಿಜಿತ್ ಸಿಂಗ್, ಧೋನಿಯ ಕಾಲಿಗೆರಗಿ ಅಭಿಮಾನ ವ್ಯಕ್ತಪಡಿಸಿದರು. ಅರಿಜಿತ್‌ರನ್ನು ತಬ್ಬಿಕೊಂಡು ಧೋನಿ ಗೌರವ ಸೂಚಿಸಿದರು. ಈ ದೃಶ್ಯ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು.
ಇನ್ನು ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಧೋನಿ ಇಷ್ಟು ವರ್ಷದಲ್ಲಿ ಸಂಪಾದಿಸಿದ್ದು ಇದೇ ಅಲ್ಲವೇ ಎಂದು ಕೊಂಡಾಡಿದ್ದಾರೆ.
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಸುಮಾರು ಒಂದು ಗಂಟೆ ಕಾಲ ನಡೆದ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನೆರೆದಿದ್ದ ಅಂದಾಜು 90000 ಪ್ರೇಕ್ಷಕರ ಕಣ್ಮನ ಸೆಳೆಯಿತು.
ಬಾಲಿವುಡ್‌ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅರ್ಧಗಂಟೆಗೂ ಹೆಚ್ಚು ಕಾಲ ಸಂಗೀತ ಸುಧೆ ಹರಿಸಿದರು. ಅರಿಜಿತ್‌ರ ಜನಪ್ರಿಯ ಹಾಡುಗಳು ಚೆನ್ನೈ ಸೂಪರ್‌ಕಿಂಗ್‌್ಸನ ನಾಯಕ, ದಿಗ್ಗಜ ಎಂ.ಎಸ್.ಧೋನಿಯೂ ತಲೆದೂಗುವಂತೆ ಮಾಡಿತು. ಧೋನಿ ಡಗೌಟ್‌ನಲ್ಲಿ ಕೂತು ಅರಿಜಿತ್‌ರ ಹಾಡುಗಳನ್ನು ಕೇಳುತ್ತಾ ಆನಂದಿಸಿದರು. ಈ ದೃಶ್ಯವನ್ನು ಕ್ರೀಡಾಂಗಣದಲ್ಲಿರುವ ದೊಡ್ಡ ಪರದೆಯ ಮೇಲೆ ಬಿತ್ತರಿಸುತ್ತಿದ್ದಂತೆ ಪ್ರೇಕ್ಷಕರ ಉತ್ಸಾಹ ಹೆಚ್ಚಿತು.
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ‍್ಯದರ್ಶಿ ಜಯ್ ಶಾ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಕೂಡ ಕಾರ‍್ಯಕ್ರಮವನ್ನು ನೋಡಿ ಖುಷಿಪಟ್ಟರು.
IPL 2023: ಕೋಲ್ಕತಾಗಿಂದು ಪಂಜಾಬ್ ಕಿಂಗ್ಸ್ ಸವಾಲು, ಶುಭಾರಂಭದ ನಿರೀಕ್ಷೆ
ಇದಾದ ಬಳಿಕ ಬಾಲಿವುಡ್‌ನ ಖ್ಯಾತ ನಟಿ ತಮನ್ಹಾ ಭಾಟಿಯಾ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ತಮನ್ಹಾರನ್ನು ನೋಡಿ ಪುಳಕಿತರಾದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಸಂತೋಷದ ಅಲೆಯಲ್ಲಿ ತೇಲಿದರು. ಮತ್ತೊಬ್ಬ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸಹ ಪ್ರಸಿದ್ಧ ಗೀತೆಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನ ಗೆದ್ದರು.
ಸಿಡಿ ಮದ್ದುಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಅಭಿಮಾನಿಗಳ ಜೊತೆ ಎರಡೂ ತಂಡಗಳ ಆಟಗಾರರೂ ಸಹ ಮೈದಾನದಲ್ಲಿ ನಿಂತು ಸುಂದರ ದೃಶ್ಯವನ್ನು ಕಣ್ತುಂಬಿಕೊಂಡರು.
ನಾಯಕರ ವಿಶೇಷ ರೈಡ್!
ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ಹಾಗೂ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ವಿಶೇಷ ವಾಹನದಲ್ಲಿ ವೇದಿಕೆಗೆ ಕರೆತರಲಾಯಿತು. ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ಟ್ರೋಫಿಯನ್ನು ಹಾರ್ದಿಕ್ ವೇದಿಕೆಗೆ ತಂದಿಟ್ಟು ಟೂರ್ನಿಗೆ ಅಧಿಕೃತ ಚಾಲನೆ ದೊರಕಿಸಿದರು.