ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದ ಬಳಿಕ, ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಪಂದ್ಯದ ರೋಚಕ ಕ್ಷಣಗಳು ಮತ್ತು ಪ್ಲೇ-ಆಫ್ ವೇಳಾಪಟ್ಟಿಯನ್ನು ಒಳಗೊಂಡಿದೆ.
ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯಲ್ಲಿ ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು. ಇದರಲ್ಲಿ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿತು. ಈ ಸಂದರ್ಭದಲ್ಲಿ ಆರ್‌ಸಿಬಿ ಮತ್ತು ತಮ್ಮ ಪತಿ ವಿರಾಟ್ ಕೊಹ್ಲಿಗೆ ಬೆಂಬಲ ನೀಡಲು ಅನುಷ್ಕಾ ಶರ್ಮಾ ಕೂಡ ಕ್ರೀಡಾಂಗಣದಲ್ಲಿದ್ದರು. ಆರ್‌ಸಿಬಿ ಗೆಲುವಿನ ನಂತರ ಅನುಷ್ಕಾ ಅವರ ಪ್ರತಿಕ್ರಿಯೆ ವೈರಲ್ ಆಗುತ್ತಿದೆ, ಇದರಲ್ಲಿ ಅವರು ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಟ್ವಿಟರ್ (X) ನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಒಂದು ಮುದ್ದಾದ ಕ್ಷಣವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಆರ್‌ಸಿಬಿ ಗೆಲುವಿನ ನಂತರ ವಿರಾಟ್ ಕೊಹ್ಲಿ ಮೈದಾನದಿಂದಲೇ ಎಲ್ಲರತ್ತ ಕೈಬೀಸುತ್ತಿದ್ದರು. ಆದರೆ ಅವರ ಕಣ್ಣುಗಳು ಸ್ಟ್ಯಾಂಡ್‌ನಲ್ಲಿದ್ದ ಅನುಷ್ಕಾ ಶರ್ಮಾ ಅವರನ್ನು ಹುಡುಕುವಂತಿತ್ತು. ಬಳಿಕ ತಮ್ಮ ಪತ್ನಿ ಅನುಷ್ಕಾಗೆ ವಿರಾಟ್ ಫ್ಲೈಯಿಂಗ್ ಕಿಸ್ ನೀಡುತ್ತಾರೆ. ಮತ್ತೊಂದೆಡೆ ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದು ಕಂಡುಬಂದಿದೆ. ಅನುಷ್ಕಾ ಕಪ್ಪು ಬಣ್ಣದ ಸ್ಲೀವ್‌ಲೆಸ್ ಟಾಪ್ ಧರಿಸಿದ್ದರು. ಕನಿಷ್ಠ ಮೇಕಪ್‌ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.
ವಿರುಷ್ಕಾ ಜೋಡಿ ಮೈದಾನದಲ್ಲಿ ಮಾತ್ರವಲ್ಲದೇ, ಮೈದಾನದ ಹೊರಗೆ ಕೂಡ ಯಾವಾಗಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಯೋಧ್ಯೆಯ ಹನುಮಾನ್‌ಗಢಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ನಂತರ ಇಬ್ಬರೂ ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ದರ್ಶನ ಪಡೆದಿದ್ದರು.
ಲಖನೌಗೆ ಸೋಲುಣಿಸಿದ ಆರ್‌ಸಿಬಿ; ಈ ಸಲ ಕಪ್ ನಮ್ದೇ?
ಲಖನೌ: 18ನೇ ವರ್ಷ ಆರ್‌ಸಿಬಿಗೆ ‘ಟ್ರೋಫಿ’ ಅದೃಷ್ಟ ಕೈಹಿಡಿಯಲಿದೆ ಎನ್ನುವ ಅಭಿಮಾನಿಗಳ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. ಐಪಿಎಲ್ 2025ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಾಖಲೆಯ ರನ್ ಚೇಸ್ ಮಾಡಿ, ಆರ್‌ಸಿಬಿ ಪ್ಲೇ-ಆಫ್‌ನ ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿದೆ. ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 228 ರನ್ ಗುರಿಯನ್ನು ಇನ್ನೂ 8 ಎಸೆತ ಬಾಕಿ ಇರುವಂತೆ ಬೆನ್ನತ್ತಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಮೊದಲು ಬ್ಯಾಟ್ ಮಾಡಿದ ಲಖನೌ, ನಾಯಕ ರಿಷಭ್ ಪಂತ್‌ರ ಸ್ಫೋಟಕ ಶತಕದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 227 ರನ್ ಕಲೆಹಾಕಿತು. ಟೂರ್ನಿಯುದ್ದಕ್ಕೂ ವೈಫಲ್ಯ ಕಂಡಿದ್ದ ಪಂತ್, ಕೊನೆಯ ಪಂದ್ಯದಲ್ಲಿ ಅಬ್ಬರಿಸಿ 54 ಎಸೆತದಲ್ಲಿ ಶತಕ ಪೂರೈಸಿದರು. 61 ಎಸೆತದಲ್ಲಿ 11 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 118 ರನ್ ಸಿಡಿಸಿ ಔಟಾಗದೆ ಉಳಿದರು. ಆರಂಭಿಕ ಮಿಚೆಲ್ ಮಾರ್ಷ್‌ರ 67 ರನ್ ಕೊಡುಗೆ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾಯಿತು.
ಆರ್‌ಸಿಬಿ ಗೆಲುವು ಸಾಧಿಸಬೇಕಿದ್ದರೆ, ದಾಖಲೆ ಮೊತ್ತವನ್ನು ಬೆನ್ನತ್ತಬೇಕಿತ್ತು. ಏಕೆಂದರೆ, ತಂಡ 200ಕ್ಕಿಂತ ಹೆಚ್ಚಿನ ಗುರಿಯನ್ನು ಕೇವಲ 2 ಬಾರಿ ಯಶಸ್ವಿಯಾಗಿ ಬೆನ್ನತ್ತಿತ್ತು. 2010ರಲ್ಲಿ ಪಂಜಾಬ್ ವಿರುದ್ಧ 204 ರನ್ ಗುರಿಯನ್ನು ಬೆನ್ನತ್ತಿದ್ದೇ ತಂಡದ ದಾಖಲೆ ಎನಿಸಿತ್ತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ, ಚಾಲೆಂಜ್ ಸ್ವೀಕರಿಸಿ ಭದ್ರ ಬುನಾದಿ ಹಾಕಿಕೊಟ್ಟರು. 4 ಓವರಲ್ಲಿ 50 ರನ್ ಚಚ್ಚಿದರು. ಆದರೆ ದಿಢೀರನೆ ಆರ್‌ಸಿಬಿ ಕುಸಿಯಿತು. 90ಕ್ಕೆ 1ರಿಂದ 123ಕ್ಕೆ 4 ವಿಕೆಟ್ ಪತನಗೊಂಡಿತು. ಪ್ರಮುಖವಾಗಿ ಅರ್ಧಶತಕ (54) ಸಿಡಿಸಿ ಆಡುತ್ತಿದ್ದ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ಆರ್‌ಸಿಬಿ ಪಾಳಯದಲ್ಲಿ ಆತಂಕ ಶುರುವಾಯಿತು.
ಶತಕದ ಜೊತೆಯಾಟ: 5ನೇ ವಿಕೆಟ್‌ಗೆ ಜಿತೇಶ್ ಹಾಗೂ ಮಯಾಂಕ್ ಅಗರ್‌ವಾಲ್ ಕ್ರೀಸ್ ಹಂಚಿಕೊಂಡಾಗ ತಂಡಕ್ಕೆ ಗೆಲ್ಲಲು 53 ಎಸೆತದಲ್ಲಿ 105 ರನ್ ಬೇಕಿತ್ತು. ಈ ಜೋಡಿ ಕೇವಲ 45 ಎಸೆತದಲ್ಲಿ 107 ರನ್ ಸೇರಿಸಿ ತಂಡವನ್ನು ಗೆಲ್ಲಿಸಿತು. ಜಿದ್ದಿಗೆ ಬಿದ್ದು ಆಡಿದ ಜಿತೇಶ್ 33 ಎಸೆತದಲ್ಲಿ 8 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 85 ರನ್ ಗಳಿಸಿದರೆ, ಮಯಾಂಕ್ 23 ಎಸೆತದಲ್ಲಿ 41 ರನ್ ಕೊಡುಗೆ ನೀಡಿದರು.
ಆರ್‌ಸಿಬಿ vs ಪಂಜಾಬ್, ಗುಜರಾತ್ vs ಮುಂಬೈ
ಪ್ಲೇ-ಆಫ್ ವೇಳಾಪಟ್ಟಿ ಅಂತಿಮಗೊಂಡಿದೆ. ಮೇ 29ರಂದು ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಮುಲ್ಲಾನ್‌ಪುರ್‌ನಲ್ಲಿ ಸೆಣಸಲಿವೆ. ಈ ಪಂದ್ಯ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೇರಲಿದ್ದು, ಸೋಲುವ ತಂಡಕ್ಕೆ ಫೈನಲ್‌ಗೇರಲು ಇನ್ನೊಂದು ಅವಕಾಶ ಇರಲಿದೆ. ಮೇ 30ರಂದು ಮುಲ್ಲಾನ್‌ಪುರದಲ್ಲೇ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಗುಜರಾತ್ ಹಾಗೂ ಮುಂಬೈ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಜೂ.1ರಂದು 2ನೇ ಕ್ವಾಲಿಫೈಯರ್ ನಡೆಯಲಿದ್ದು, ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸೆಣಸಲಿವೆ. ಜೂ.3ರಂದು ಫೈನಲ್ ನಿಗದಿಯಾಗಿದೆ. ಈ ಎರಡೂ ಪಂದ್ಯಗಳಿಗೆ ಅಹಮದಾಬಾದ್ ಆತಿಥ್ಯ ನೀಡಲಿದೆ.
