ದುಬೈ(ಏ.02): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ವಿಶ್ವದ ಹಲವು ಅಗ್ರ ಕ್ರಿಕೆಟಿಗರಿಂದ ಆಕ್ಷೇಪ ವ್ಯಕ್ತವಾಗಿದ್ದರೂ, ಅಂಪೈರ್‌ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್‌ಎಸ್‌) ವ್ಯವಸ್ಥೆಯಲ್ಲಿ ‘ಅಂಪೈರ್ಸ್ ಕಾಲ್‌’ ನಿಯಮ ರದ್ದುಗೊಳಿಸದಿರಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿರ್ಧರಿಸಿದೆ. ಆದರೆ ಎಲ್‌ಬಿಡಬ್ಲ್ಯು ಮೇಲ್ಮನವಿ ವಿಚಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. 

‘ಬುಧವಾರ ನಡೆದ ಸಭೆಯಲ್ಲಿ ಅಂಪೈ​ರ್ಸ್ ಕಾಲ್‌ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಸಲಾಯಿತು. ಅದರ ಬಳಕೆಯ ಬಗ್ಗೆ ಸಂಪೂರ್ಣವಾಗಿ ವಿಶ್ಲೇಷಿಸಲಾಯಿತು. ತಂತ್ರಜ್ಞಾನದಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಂಪೈರ್ಸ್ ಕಾಲ್‌ ಬಳಕೆಯಲ್ಲಿದೆ. ಜೊತೆಗೆ ಮೈದಾನದಲ್ಲಿ ಅಂಪೈರ್‌ಗಳೇ ತೀರ್ಮಾನ ಕೈಗೊಳ್ಳುವವರಾಗಿ ಮುಂದುವರಿಯಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಐಸಿಸಿ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥ ಅನಿಲ್‌ ಕುಂಬ್ಳೆ ತಿಳಿಸಿದ್ದಾರೆ.

ಈಗಿರುವ ನಿಯಮದ ಪ್ರಕಾರ, ಮೈದಾನದಲ್ಲಿರುವ ಅಂಪೈರ್‌ ನಾಟ್‌ ಔಟ್‌ ಎಂದು ನೀಡಿದ ಎಲ್‌ಬಿಡ್ಲ್ಯು ನಿರ್ಣಯವನ್ನು ಫೀಲ್ಡಿಂಗ್‌ ಮಾಡುತ್ತಿರುವ ತಂಡ ಪ್ರಶ್ನಿಸಿದಾಗ ಚೆಂಡು ಮೂರು ಸ್ಟಂಪ್‌ಗಳ ಪೈಕಿ ಒಂದಕ್ಕಾದರೂ ಶೇ.50ರಷ್ಟು ತಾಗುವಂತಿರಬೇಕು. ಆದರೆ ಚೆಂಡು ವಿಕೆಟ್‌ಗೆ ತಾಗಲಿದೆ ಎಂದು ಖಾತ್ರಿಯಾದರೆ ಸಾಕು ಎಲ್‌ಬಿಡಬ್ಲ್ಯು ನೀಡಬೇಕು ಎಂದು ಕೊಹ್ಲಿ ವಾದಿಸಿದ್ದರು.

ಸಣ್ಣ ಬದಲಾವಣೆ: ಈಗಿನ ನಿಯಮದ ಪ್ರಕಾರ, ಎಲ್‌ಬಿಡಬ್ಲ್ಯು ಮೇಲ್ಮನವಿ ಸಲ್ಲಿಸಿದಾಗ ಚೆಂಡು ಬೇಲ್ಸ್‌ಗಳ ಕೆಳಭಾಗಕ್ಕೆ ತಾಗುತ್ತಿದ್ದರೆ ಅಂಪೈರ್ಸ್ ಕಾಲ್‌ ವ್ಯಾಪ್ತಿಗೆ ಒಳಪಡುತ್ತದೆ ಎಂದಿದೆ. ಆದರೆ ಈ ನಿಯಮವನ್ನು ಬದಲಿಸಲಾಗಿದ್ದು, ಬೇಲ್ಸ್‌ನ ಮೇಲ್ಭಾಗಕ್ಕೆ ತಗುಲಲಿದೆ ಎಂದು ಖಾತ್ರಿಯಾದರೂ ಅಂಪೈರ್ಸ್‌ ಕಾಲ್‌ ವ್ಯಾಪ್ತಿಗೆ ಸೇರಿಸಲು ಐಸಿಸಿ ನಿರ್ಧರಿಸಿದೆ.

‘ಅಂಪೈ​ರ್ಸ್ ಕಾಲ್‌’ಬಗ್ಗೆ ಐಸಿಸಿಗೆ ಎಚ್ಚರಿಕೆ ಕೊಟ್ಟ ವಿರಾಟ್‌ ಕೊಹ್ಲಿ

3ನೇ ಅಂಪೈರಿಂದ ‘ರನ್‌ ಶಾರ್ಟ್‌’ ನಿರ್ಣಯ: ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳು ರನ್‌ಗೆ ಓಡುವಾಗ ಕ್ರೀಸ್‌ನೊಳಗೆ ಪ್ರವೇಶಿಸಿದ್ದಾರೆಯೇ ಇಲ್ಲವೇ ಎನ್ನುವುದನ್ನು 3ನೇ ಅಂಪೈರ್‌ ಖಚಿತಪಡಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಒಂದು ವೇಳೆ ‘ರನ್‌ ಶಾರ್ಟ್‌’ ಆಗಿದ್ದರೆ 3ನೇ ಅಂಪೈರ್‌, ಮೈದಾನದಲ್ಲಿರುವ ಅಂಪೈರ್‌ ಜೊತೆ ಸಂವಹನ ನಡೆಸಿ ರನ್‌ ಕಡಿತಗೊಳಿಸಬಹುದಾಗಿದೆ.