‘ಅಂಪೈರ್ಸ್ ಕಾಲ್’ಬಗ್ಗೆ ಐಸಿಸಿಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ
ಎಲ್‌ಬಿಡಬ್ಲ್ಯೂ ವಿಚಾರದಲ್ಲಿ ಅಂಪೈರ್ ಕಾಲ್ ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದ್ದು, ಮಹತ್ವದ ಪಂದ್ಯಗಳಲ್ಲಿ ಈ ನಿಯಮ ವಿವಾದಕ್ಕೆ ಕಾರಣವಾಗಬಹುದು ಎಂದು ವಿರಾಟ್ ಕೊಹ್ಲಿ ಐಸಿಸಿಯನ್ನು ಎಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪುಣೆ(ಮಾ.23): ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್‌ಎಸ್) ವೇಳೆ ‘ಅಂಪೈರ್ಸ್ ಕಾಲ್’ ನಿಯಮದ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ. ಮುಂದುವರೆದು ಮಹತ್ವದ ಪಂದ್ಯಗಳಲ್ಲಿ ಈ ನಿಯಮ ವಿವಾದಕ್ಕೆ ಕಾರಣವಾಗಬಹುದು ಎಂದು ಐಸಿಸಿ ವಿರಾಟ್ ಎಚ್ಚರಿಕೆ ನೀಡಿದ್ದಾರೆ.
ಎಲ್‌ಬಿಡಬ್ಲ್ಯು ವೇಳೆ ಹೆಚ್ಚಾಗಿ ಬಳಕೆಯಾಗುವ ಈ ನಿಯಮದಿಂದ ಬಹಳ ಗೊಂದಲವಾಗುತ್ತಿದೆ. ನಿಯಮ ಸರಳಗೊಳಿಸಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ಆಗ್ರಹಿಸಿದ್ದಾರೆ. ‘ಚೆಂಡು ವಿಕೆಟ್ಸ್‌ಗೆ ತಗಲುತ್ತಿದೆ ಎಂದರೆ ಔಟ್, ಇಲ್ಲವಾದರೆ ಔಟ್ ಇಲ್ಲ. ಇಷ್ಟೇ ಆಗಬೇಕಿರುವುದು’ ಎಂದು ಕೊಹ್ಲಿ ಹೇಳಿದ್ದಾರೆ.
ವಿವಾದ ಸೃಷ್ಟಿಸಿದ ಸೂರ್ಯಕುಮಾರ್ ಯಾದವ್ ಔಟ್..! ಸಾಫ್ಟ್ ಸಿಗ್ನಲ್ ಬಗ್ಗೆ ನೆಟ್ಟಿಗರು ಗರಂ
ಈಗಿರುವ ನಿಯಮದ ಪ್ರಕಾರ, ಅಂಪೈರ್ ತೀರ್ಪನ್ನು ಪ್ರಶ್ನಿಸಿದಾಗ ಚೆಂಡು ಯಾವುದಾದರೂ ಒಂದು ಸ್ಟಂಪ್‌ಗೆ ಶೇ.50ರಷ್ಟು ತಗಲುತ್ತಿರಬೇಕು. ಆಗಷ್ಟೇ ಅಂಪೈರ್ ನಿರ್ಧಾರ ಬದಲಿಸಬಹುದು. ಈ ನಿಯಮವನ್ನು ಪ್ರಶ್ನಿಸಿರುವ ಕೊಹ್ಲಿ, ‘ಬ್ಯಾಟ್ಸ್‌ಮನ್ ಬೌಲ್ಡ್ ಆದಾಗ ಚೆಂಡು ಶೇಕಡ ಎಷ್ಟು ತಗುಲಿತ್ತಿತ್ತು ಎಂದು ನೋಡುತ್ತಾರೆಯೇ?. ಹೀಗಿರುವಾಗ ಎಲ್‌ಬಿಡಬ್ಲ್ಯುಗೆ ಯಾಕಿಷ್ಟು ಗೊಂದಲ. ಮಹತ್ವದ ಪಂದ್ಯಗಳಲ್ಲಿ ಈ ನಿಯಮ ವಿವಾದಕ್ಕೆ ಕಾರಣವಾಗಬಹುದು’ ಎಂದು ಐಸಿಸಿಗೆ ವಿರಾಟ್ ಎಚ್ಚರಿಸಿದ್ದಾರೆ.