ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ತಮ್ಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಅವರು 22 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಹೊರಹೊಮ್ಮಿದ್ದಾರೆ.
ನವಿ ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಸರಣಿಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ವಿಶ್ವಕಪ್‌ನಾದ್ಯಂತ ತೋರಿದ ಆಲ್‌ರೌಂಡ್ ಪ್ರದರ್ಶನವೇ ದೀಪ್ತಿಯನ್ನು ಈ ಗೌರವಕ್ಕೆ ಪಾತ್ರವಾಗುವಂತೆ ಮಾಡಿದೆ. ಒಂಬತ್ತು ಪಂದ್ಯಗಳಲ್ಲಿ 22 ವಿಕೆಟ್ ಪಡೆದ ದೀಪ್ತಿ, ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯೂ ಹೌದು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದೀಪ್ತಿ ಶರ್ಮಾ ಕೇವಲ 39 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದು ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದೀಪ್ತಿಯವರಿಂದ ಮೂಡಿ ಬಂದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿತು. ಇನ್ನು ಬ್ಯಾಟಿಂಗ್‌ನಲ್ಲಿ ದೀಪ್ತಿ ಶರ್ಮಾ ಏಳು ಇನ್ನಿಂಗ್ಸ್‌ಗಳನ್ನಾಡಿ ಮೂರು ಅರ್ಧಶತಕ ಸಹಿತ 215 ರನ್ ಸಿಡಿಸುವಲ್ಲಿ ಯಶಸ್ವಿಯಾದರು.
ವಿಕೆಟ್ ಬೇಟೆಯಲ್ಲಿ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್‌ಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದಾರೆ. ಆಸೀಸ್ ವೇಗಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. 40 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನ. ಒಂದು ಬಾರಿ ಐದು ವಿಕೆಟ್ ಸಾಧನೆಯನ್ನೂ ಮಾಡಿದ್ದಾರೆ. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ (16) ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಪಿನ್ನರ್ ಶ್ರೀಚರಣಿ (14) ನಾಲ್ಕನೇ ಸ್ಥಾನದಲ್ಲಿದ್ದಾರೆ. ತಲಾ 13 ವಿಕೆಟ್ ಪಡೆದ ಆಸ್ಟ್ರೇಲಿಯಾದ ಅಲಾನಾ ಕಿಂಗ್ ಮತ್ತು ದಕ್ಷಿಣ ಆಫ್ರಿಕಾದ ನಾನ್‌ಕುಲುಲೆಕೊ ಮ್ಲಾಬಾ ನಂತರದ ಎರಡು ಸ್ಥಾನಗಳಲ್ಲಿದ್ದಾರೆ.
ಗರಿಷ್ಠ ರನ್ ಬಾರಿಸಿದ ಲಾರಾ ವೋಲ್ವಾರ್ಡ್ಟ್
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್. ಒಂಬತ್ತು ಇನ್ನಿಂಗ್ಸ್‌ಗಳಿಂದ ಲಾರಾ 571 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಲಾರಾ ಶತಕಗಳನ್ನು ಗಳಿಸಿದರು. ಇಂಗ್ಲೆಂಡ್ ವಿರುದ್ಧ ಗಳಿಸಿದ 169 ರನ್ ಲಾರಾ ಅವರ ಗರಿಷ್ಠ ಸ್ಕೋರ್ ಆಗಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ 71.37ರ ಸರಾಸರಿ ಮತ್ತು 98.78ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಲಾರಾ 7 ಸಿಕ್ಸರ್ ಮತ್ತು 73 ಬೌಂಡರಿಗಳನ್ನು ಬಾರಿಸಿದ್ದಾರೆ.
ಟಾಪ್-5 ಪಟ್ಟಿಯಲ್ಲಿ ಭಾರತದ ಇಬ್ಬರಿಗೆ ಸ್ಥಾನ
ರನ್ ಗಳಿಸಿದವರಲ್ಲಿ ಭಾರತದ ಉಪನಾಯಕಿ ಸ್ಮೃತಿ ಮಂಧನಾ ಎರಡನೇ ಸ್ಥಾನದಲ್ಲಿದ್ದಾರೆ. 9 ಇನ್ನಿಂಗ್ಸ್‌ಗಳಿಂದ 434 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ ಮಂಧನಾ ಅವರ ಗರಿಷ್ಠ ಸ್ಕೋರ್ 109 ರನ್ ಆಗಿದೆ. ಮಂಧನಾ 54.25ರ ಸರಾಸರಿ ಮತ್ತು 99.08ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್ ಮೂರನೇ ಸ್ಥಾನದಲ್ಲಿದ್ದಾರೆ. ಕೇವಲ ಐದು ಇನ್ನಿಂಗ್ಸ್‌ಗಳಿಂದ ಗಾರ್ಡ್ನರ್ 328 ರನ್ ಗಳಿಸಿದ್ದಾರೆ. 115 ರನ್ ಅವರ ಗರಿಷ್ಠ ಸ್ಕೋರ್. 82.00 ಸರಾಸರಿ ಮತ್ತು 130.15 ಸ್ಟ್ರೈಕ್ ರೇಟ್. ಗಾರ್ಡ್ನರ್ ಎರಡು ಶತಕ ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ.
ಪ್ರತೀಕಾ ರಾವಲ್ ಅಗ್ರ ಐದರಲ್ಲಿರುವ ಮತ್ತೊಬ್ಬ ಭಾರತೀಯ ಆಟಗಾರ್ತಿ. ಗಾಯದ ಕಾರಣ ಪ್ರತೀಕಾಗೆ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆರು ಇನ್ನಿಂಗ್ಸ್‌ಗಳಿಂದ ಪ್ರತಿಕಾ 308 ರನ್ ಗಳಿಸಿದ್ದಾರೆ. ಪ್ರತೀಕಾ ಖಾತೆಯಲ್ಲಿ ತಲಾ ಒಂದು ಶತಕ ಮತ್ತು ಅರ್ಧಶತಕವಿದೆ. ಪ್ರತಿಕಾ 51.33ರ ಸರಾಸರಿ ಮತ್ತು 77.77ರ ಸ್ಟ್ರೈಕ್ ರೇಟ್‌ನಲ್ಲಿ ಇಷ್ಟು ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಫೋಬೆ ಲಿಚ್‌ಫೀಲ್ಡ್ ಐದನೇ ಸ್ಥಾನದಲ್ಲಿದ್ದಾರೆ. ಏಳು ಪಂದ್ಯಗಳಲ್ಲಿ 304 ರನ್ ಸಿಡಿಸಿದ್ದರು. 119 ರನ್ ಅವರ ಗರಿಷ್ಠ ಸ್ಕೋರ್. ಈ ಆಟಗಾರ್ತಿ ಒಂದು ಶತಕ ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ.
