* ಲಂಕಾ ವಿರುದ್ದದ ಟಿ20 ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ* 6 ವರ್ಷಗಳ ಬಳಿಕ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆದ ಕ್ರಿಸ್ ವೋಕ್ಸ್* ಲಂಕಾ ವಿರುದ್ದದ ಟಿ20 ಸರಣಿ ಜೂನ್ 23ರಿಂದ ಆರಂಭ

ಲಂಡನ್‌(ಜೂ.14): ಇಂಗ್ಲೆಂಡ್ ತಂಡದ ಆಲ್ರೌಂಡರ್ ಕ್ರಿಸ್ ವೋಕ್ಸ್‌ ಬರೋಬ್ಬರಿ 6 ವರ್ಷಗಳ ಬಳಿಕ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ದ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ವೋಕ್ಸ್‌ ಆಂಗ್ಲರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕ್ರಿಸ್‌ ವೋಕ್ಸ್‌ ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲುವಿನಲ್ಲಿ ವೋಕ್ಸ್‌ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದರು. ಹೀಗಿದ್ದೂ ಟಿ20 ತಂಡದಲ್ಲಿ ಕಾಯಂ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ವೋಕ್ಸ್ ಇದುವರೆಗೂ ಇಂಗ್ಲೆಂಡ್ ಪರ ಕೇವಲ 8 ಟಿ20 ಪಂದ್ಯಗಳನ್ನಷ್ಟೇ ಆಡಿದ್ದು, 2015ರ ನವೆಂಬರ್ ಬಳಿಕ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದೀಗ ಲಂಕಾ ಎದುರಿನ ಸರಣಿಯಲ್ಲಿ ಉತ್ತಮ ತೋರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಲು ವೋಕ್ಸ್ ಎದುರು ನೋಡುತ್ತಿದ್ದಾರೆ.

ಅನುಚಿತ ವರ್ತನೆ: 3 ಪಂದ್ಯಗಳಿಗೆ ಶಕೀಬ್ ಅಲ್‌ ಹಸನ್‌ ಬ್ಯಾನ್

ಕ್ರಿಸ್ ವೋಕ್ಸ್‌ ಕೋವಿಡ್‌ ನಿಯಮಾವಳಿಗಳು ಹಾಗೂ ವಿವಾದಾತ್ಮಕ ರೊಟೇಷನ್ ಪಾಲಿಸಿಗಳ ಕಾರಣದಿಂದಾಗಿ ಕಳೆದ ಸೆಪ್ಟೆಂಬರ್‌ನಿಂದೀಚೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಯಾವುದೇ ಮಾದರಿಯಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಸದ್ಯ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್‌ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರಿಂದಾಗಿ ಕ್ರಿಸ್‌ ವೋಕ್ಸ್‌ಗೆ ಅವಕಾಶ ಹುಡುಕಿಕೊಂಡು ಬಂದಿದೆ.

ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯು ಜೂನ್ 23ರಿಂದ ಆರಂಭವಾಗಲಿದ್ದು, 23 ಹಾಗೂ 24ರಂದು ನಡೆಯಲಿರುವ ಮೊದಲೆರಡು ಟಿ20 ಪಂದ್ಯಗಳಿಗೆ ಕಾರ್ಡಿಫ್ ಆತಿಥ್ಯವನ್ನು ವಹಿಸಿದ್ದರೆ, ಜೂನ್ 26ರಂದು ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೆ ಸೌಥಾಂಪ್ಟನ್‌ ಆತಿಥ್ಯವನ್ನು ವಹಿಸಲಿದೆ.

ಲಂಕಾ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಇಯಾನ್ ಮಾರ್ಗನ್‌(ನಾಯಕ), ಮೋಯಿನ್ ಅಲಿ, ಜಾನಿ ಬೇರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ಟಾಮ್ ಕರ್ರನ್, ಲಿಯಾಮ್ ಡಾಸನ್‌, ಕ್ರಿಸ್ ಜೋರ್ಡನ್‌, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲೇ, ಕ್ರಿಸ್ ವೋಕ್ಸ್, ಮಾರ್ಕ್‌ ವುಡ್.