* ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ ಶಕೀಬ್‌ಗೆ ನಿ‍ಷೇಧದ ಶಿಕ್ಷೆ* ಢಾಕಾ ಪ್ರೀಮಿಯರ್ ಲೀಗ್‌ನ 3 ಪಂದ್ಯಗಳಿಂದ ಶಕೀಬ್ ಬ್ಯಾನ್‌* ವಿಕೆಟ್ ಕಿತ್ತೆಸೆದು ಅಂಪೈರ್ ಮೇಲೆ ಆಕ್ರೋಶ ಹೊರಹಾಕಿದ್ದ ಶಕೀಬ್ ಅಲ್ ಹಸನ್

ಢಾಕಾ(ಜೂ.14): ಬಾಂಗ್ಲಾದೇಶ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್‌ ಹಸನ್ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಮೈದಾನದಲ್ಲೇ ಅನುಚಿತ ವರ್ತನೆ ಮಾಡಿದ ತಪ್ಪಿಗಾಗಿ 5,900 ಡಾಲರ್ ದಂಡ ಹಾಗೂ 3 ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. 

ಮೊಹಮ್ಮದುನ್‌ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಹಾನಿ ತಂಡಗಳ ನಡುವಿನ ಟಿ20 ಪಂದ್ಯದಲ್ಲಿ ಎರಡೆರಡು ಬಾರಿ ಶಕೀಬ್ ಅಲ್ ಹಸನ್ ಕ್ರೀಡಾಸ್ಪೂರ್ತಿ ಮರೆತು ಅನುಚಿತವಾಗಿ ವರ್ತಿಸಿದ್ದರು. ಒಮ್ಮೆ ವಿಕೆಟ್‌ಗೆ ಜಾಡಿಸಿ ಒದ್ದರೆ ಮತ್ತೊಮ್ಮೆ ವಿಕೆಟ್ ಕಿತ್ತೆಸೆದು ಅಂಪೈರ್ ಮೇಲೆ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕ್ರಿಕೆಟ್ ಪ್ರೇಮಿಗಳು ಹಾಗೂ ಹಿರಿಯ ಕ್ರಿಕೆಟಿಗರು, ಅನುಭವಿ ಕ್ರಿಕೆಟಿಗ ಶಕೀಬ್ ಅವರಿಂದ ಇಂತಹ ವರ್ತನೆ ನಿರೀಕ್ಷಿಸರಲಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು. 

Scroll to load tweet…

ಅಭಿಮಾನಿಗಳೇ, ತಪ್ಪಾಯ್ತು ಕ್ಷಮೆಯಿರಲಿ ಎಂದ ಶಕೀಬ್ ಅಲ್ ಹಸನ್

ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ತಾರಾ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು ಢಾಕಾ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಮುಂದಿನ 3 ಪಂದ್ಯಗಳ ಮಟ್ಟಿಗೆ ನಿಷೇಧದ ಶಿಕ್ಷೆ ವಿಧಿಸಿದೆ. ಇದು ಉಳಿದ ಆಟಗಾರರ ಪಾಲಿಗೆ ಎಚ್ಚರಿಕೆಯ ಘಂಟೆಯಾಗುವ ಸಾಧ್ಯತೆಯಿದೆ. 

ಮೊಹಮ್ಮದುನ್‌ ಸ್ಪೋರ್ಟಿಂಗ್ ಕ್ಲಬ್ ತಂಡದ ನಾಯಕ ಶಕೀಬ್ ಮೊದಲಿಗೆ ಅಂಪೈರ್ ತಮ್ಮ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಮನವಿ ಪುರಷ್ಕರಿಸಲಿಲ್ಲ ಎಂದು ನಾನ್‌ಸ್ಟ್ರೈಕ್‌ನಲ್ಲಿದ್ದ ವಿಕೆಟ್‌ಗೆ ಜಾಡಿಸಿ ಒದ್ದು ಅಸಮಾಧಾನ ಹೊರಹಾಕಿದ್ದರು. ಇದಾದ ಮರು ಓವರ್‌ನಲ್ಲಿ 5.5ನೇ ಓವರ್‌ನಲ್ಲಿ ತುಂತುರು ಮಳೆ ಬಂದಿದ್ದರಿಂದ ಅಂಪೈರ್ ಪಂದ್ಯವನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದಾಗ, ಇನ್ನೊಂದು ಎಸೆತ ಹಾಕಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡು ವಿಕೆಟ್‌ಗಳನ್ನು ಕಿತ್ತು ನೆಲಕ್ಕೆ ಅಪ್ಪಳಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಘಟನೆ ವಿವಾದದಕ್ಕೆ ತಿರುಗುತ್ತಿದ್ದಂತೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಮೂಲಕ ತಮ್ಮ ಅಭಿಮಾನಿಗಳಲ್ಲಿ, ಆಯೋಜಕರಲ್ಲಿ ಹಾಗೂ ತಂಡಗಳ ಪರವಾಗಿ ಶಕೀಬ್ ಅಲ್ ಹಸನ್ ಕ್ಷಮೆಯಾಚಿಸಿದ್ದರು. ಇದಷ್ಟೇ ಅಲ್ಲದೇ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದರು.