* ಪಾಕ್‌ ವಿರುದ್ದದ ಸರಣಿಗೆ ಇಂಗ್ಲೆಂಡ್ ನೂತನ ತಂಡ ಪ್ರಕಟ* ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಲಿದ್ದಾರೆ ಸ್ಟೋಕ್ಸ್* ಪಾಕ್‌ ವಿರುದ್ದ ತವರಿನಲ್ಲಿ ಏಕದಿನ ಸರಣಿ ಆಡಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ

ಲಂಡನ್(ಜು.06): ಪಾಕಿಸ್ತಾನ ವಿರುದ್ದ ತವರಿನಲ್ಲಿ ನಡೆಯಲಿರುವ ರಾಯಲ್‌ ಲಂಡನ್‌ ಸೀರೀಸ್‌ಗೆ ಇಂಗ್ಲೆಂಡ್‌ ತಂಡವನ್ನು ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ ಮುನ್ನಡೆಸಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಏಕದಿನ ತಂಡಕ್ಕೆ ಸ್ಟೋಕ್ಸ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಪರ ಕ್ಷೇತ್ರರಕ್ಷಣೆ ಮಾಡುವಾಗ ಎಡಗೈ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಕಲೆ ತಿಂಗಳುಗಳಿಂದ ಸ್ಟೋಕ್ಸ್‌ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಪಾಕಿಸ್ತಾನ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಈಗಾಗಲೇ ತಂಡವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಆದರೆ ಪಾಕ್‌ ವಿರುದ್ದದ ಸರಣಿ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಇಂಗ್ಲೆಂಡ್ ತಂಡದ ಮೂವರು ಆಟಗಾರರು ಹಾಗೂ ನಾಲ್ವರು ಸಹಾಯಕ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಟಗಾರರನ್ನು ಸದ್ಯ ಐಸೋಲೇಷನ್‌ನಲ್ಲಿ ಇಡಲಾಗಿದೆ. ಹೀಗಾಗಿ ಈ ಮೊದಲು ಪಾಕಿಸ್ತಾನ ವಿರುದ್ದದ ಸರಣಿಗೆ ಆಯ್ಕೆಯಾಗಿದ್ದ ಎಲ್ಲಾ 16 ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದಾರೆ.

Scroll to load tweet…

ಇದೀಗ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿ ಬಳಿಕ ಬಿಡುವು ಪಡೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಇದರ ಜತೆಗೆ 9 ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವನ್ನಾಡದ ಆಟಗಾರರಿಗೆ ಇಂಗ್ಲೆಂಡ್‌ ತಂಡದಲ್ಲಿ ಮಣೆ ಹಾಕಲಾಗಿದೆ.

Scroll to load tweet…

ಇಂಗ್ಲೆಂಡ್‌ ಕ್ರಿಕೆಟ್ ತಂಡದ 7 ಮಂದಿಗೆ ಕೋವಿಡ್ ಪಾಸಿಟಿವ್

ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆ ಸಿಕ್ಕಿದೆ. ಕೆಲವು ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಆಟಗಾರರಿಗೆ ಈ ಸಂದರ್ಭದಲ್ಲಿ ಅವಕಾಶ ನೀಡಲಾಗಿದ್ದು, ಇದನ್ನು ಭರಪೂರವಾಗಿ ಬಳಸಿಕೊಳ್ಳಲು ಯುವ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಕ್ರಿಕೆಟ್ ಕ್ರಿಕೆಟ್ ತಂಡದ ವ್ಯವಸ್ಥಾಪಕ ನಿರ್ದೇಶಕ ಆಶ್ಲೇ ಗಿಲ್ಸ್ ಹೇಳಿದ್ದಾರೆ. 

ಬೆನ್ ಸ್ಟೋಕ್ಸ್ ಇದುವರೆಗೂ ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡವನ್ನು ಮುನ್ನಡೆಸಿಲ್ಲ. ಇದು ಬೆನ್‌ಗೆ ಸಿಕ್ಕಿರುವ ಅತಿದೊಡ್ಡ ಗೌರವ. ಅವರು ತಮಗೆ ಸಿಕ್ಕಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ವಿಶ್ವಾಸವಿದೆ ಎಂದು ಗಿಲ್ಸ್ ಹೇಳಿದ್ದಾರೆ. 

ಇಂಗ್ಲೆಂಡ್ ಕ್ರಿಕೆಟ್ ತಂಡವು ತವರಿನಲ್ಲಿ ಪಾಕಿಸ್ತಾನ ವಿರುದ್ದ 6 ಪಂದ್ಯಗಳ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 08ರಿಂದ ಆರಂಭವಾಗಲಿದೆ. ಇನ್ನು 3 ಪಂದ್ಯಗಳ ಟಿ20 ಸರಣಿ ಜುಲೈ 16ರಿಂದ ಆರಂಭವಾಗಲಿದೆ. 

ಪಾಕಿಸ್ತಾನ ವಿರುದ್ದದ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಬೆನ್ ಸ್ಟೋಕ್ಸ್(ನಾಯಕ), ಜೇಕ್ ಬಾಲ್, ಡ್ಯಾನಿ ಬ್ರಿಗ್ಸ್, ಬ್ರೈಡನ್‌ ಕೇರ್ಸ್‌, ಜಾಕ್‌ ಕ್ರಾವ್ಲೆ, ಬೆನ್ ಡುಕೆಟ್, ಲೆವಿಸ್ ಗ್ರೆಗೊರಿ, ಟಾಮ್‌ ಹೀಲ್ಮ್, ವಿಲ್ ಜೇಕ್ಸ್, ಡಾನ್ ಲಾರೆನ್ಸ್, ಸಕೀಬ್ ಮೊಹಮ್ಮದ್, ಡೇವಿಡ್ ಮಲಾನ್, ಕ್ರೆಗ್ ಓವರ್‌ಟನ್‌, ಮ್ಯಾಟ್ ಪಾರ್ಕಿನ್‌ಸನ್, ಡೇವಿಡ್‌ ಪೇಯ್ನೆ, ಫಿಲ್ ಸಾಲ್ಟ್, ಜಾನ್‌ ಸಿಂಪ್ಸನ್ ಹಾಗೂ ಜೇಮ್ಸ್ ವಿನ್ಸಿ.