ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದಾರೆ. ಅವರ ಈ ಸ್ಫೋಟಕ ಬ್ಯಾಟಿಂಗ್‌ಗೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಎಲ್ಲರ ಕಣ್ಣು ಕ್ವಾಲಿಫೈಯರ್ ಪಂದ್ಯದ ಮೇಲಿದೆ.

ನ್ಯೂ ಚಂಡೀಗಢ: ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದ್ದು, ಎಲ್ಲರ ಕಣ್ಣುಗಳು ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಧೂಳೀಪಟ ಮಾಡಿದ್ದ ವೈಭವ್, ಇಂದೂ ಕೂಡ ಅದೇ ಮ್ಯಾಜಿಕ್ ಮಾಡ್ತಾರೆ ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಪವರ್‌ಪ್ಲೇ ಅಂದ್ರೆ ಅದು ತನ್ನದೇ ಆಟ ಅಂತ ಯುವ ಸೆನ್ಸೇಷನ್ ಸೂರ್ಯವಂಶಿ ಸಾಬೀತುಪಡಿಸುತ್ತಿದ್ದಾರೆ. ಎಲಿಮಿನೇಟರ್‌ನಲ್ಲಿ ಹೈದರಾಬಾದ್ ತಂಡ ನಿಜವಾಗಿಯೂ ಸೋತಿದ್ದು ಸೂರ್ಯವಂಶಿ ಆಟದ ಮುಂದೆಯೇ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲರ ಕಣ್ಣು 15ರ ಪೋರ ವೈಭವ್ ಸೂರ್ಯವಂಶಿ ಮೇಲೆ

ಕ್ರೀಸ್‌ನಲ್ಲಿದ್ದಾಗ ವೈಭವ್ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್‌ಗಳ ಸಹಿತ 97 ರನ್ ಚಚ್ಚಿದ್ದರು. ತಂತ್ರಗಾರಿಕೆಯ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಕೂಡ ವೈಭವ್ ಆಟದ ಮುಂದೆ ಕಂಗಾಲಾಗಿದ್ದರು. ತಾನೊಬ್ಬ ಕಂಪ್ಲೀಟ್ ಟೀಮ್ ಮ್ಯಾನ್, ಪರಿಸ್ಥಿತಿಗೆ ತಕ್ಕಂತೆ ಗೇಮ್ ಪ್ಲಾನ್ ಬದಲಿಸುತ್ತೇನೆ ಎಂದು ವೈಭವ್ ಹೇಳುತ್ತಾರೆ. ಸೂರ್ಯವಂಶಿ ಅವರ ಈ ಭರ್ಜರಿ ಇನ್ನಿಂಗ್ಸ್‌ಗೆ ಮಾಜಿ ಆಟಗಾರರಿಂದಲೂ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿದೆ. ಸೂರ್ಯವಂಶಿ ಅವರ ಬ್ಯಾಟ್ ಸ್ವಿಂಗ್ ಅದ್ಭುತವಾಗಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸೂರ್ಯವಂಶಿ ಈಗಾಗಲೇ ಮುರಿದಿದ್ದಾರೆ. ಅತಿ ವೇಗದ ಟಿ20 ಶತಕದ ದಾಖಲೆಯತ್ತ ವೈಭವ್ ಈಗ ಚಿತ್ತ ನೆಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ಈ ದಾಖಲೆ ಸ್ವಲ್ಪದರಲ್ಲೇ ಮಿಸ್ ಆದರೂ, ಮುಂದಿನ ಬಾರಿ ವೈಭವ್ ಇದನ್ನು ಸಾಧಿಸುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆ.

ವೈಭವ್‌ ಬ್ಯಾಟಿಂಗ್‌ಗೆ ಸಚಿನ್‌, ಕುಂಬ್ಳೆ ಎಬಿಡಿ ಸೇರಿ ಕ್ರಿಕೆಟ್‌ ದಿಗ್ಗಜರ ಮೆಚ್ಚುಗೆ

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಐಪಿಎಲ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ 15ರ ವೈಭವ್‌ ಸೂರ್ಯವಂಶಿ 29 ಎಸೆತದಲ್ಲಿ 97 ರನ್‌ ಸಿಡಿಸಿದ್ದಕ್ಕೆ, ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್‌, ಅನಿಲ್‌ ಕುಂಬ್ಳೆ, ಎಬಿ ಡಿವಿಲಿಯರ್ಸ್‌, ಸುರೇಶ್‌ ರೈನಾ, ಯುವರಾಜ್‌ ಸಿಂಗ್ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್‌, ‘ವೈಭವ್‌ ಬ್ಯಾಟಿಂಗ್‌ ಅದ್ಭುತ ಆಟವಲ್ಲದೆ ಮತ್ತೇನೂ ಅಲ್ಲ’ ಎಂದು ಬಣ್ಣಿಸಿದ್ದಾರೆ. ‘ಯಾವುದೇ ಒತ್ತಡಕ್ಕೂ ತಾವು ಒಳಗಾಗುವುದಿಲ್ಲ’ ಎಂದು ವೈಭವ್‌ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ಕುಂಬ್ಳೆ ಹೇಳಿದ್ದಾರೆ. ‘ ಬಾಸ್‌ ಬೇಬಿ ವಿಶ್ವ ಬಾಸ್‌ ದಾಖಲೆಯನ್ನು ಮುರಿದಿದ್ದಾರೆ. ಅದ್ಭುತ ಆಟ’ ಎಂದು ಯುವಿ ಹೊಗಳಿದ್ದಾರೆ. ಸುರೇಶ್‌ ರೈನಾ ಕೂಡ ಪ್ರತಿಕ್ರಿಯಿಸಿದ್ದು, ‘ ವೈಭವ್‌ ಆಟ ವರ್ಣಿಸಲು ನಿಘಂಟಿನಲ್ಲಿ ಪದಗಳಿಲ್ಲ’ ಎಂದಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌, ಲಖನೌ ಸೂಪರ್‌ಜೈಂಟ್ಸ್‌ ತಂಡದ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ‘ನಾನು ನನ್ನ ಜೀವನದಲ್ಲಿ ಕೇವಲ ಇಬ್ಬರು ಕ್ರೀಡಾಪಟು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೇನೆ. ಅದರಲ್ಲಿ ವೈಭವ್ ಒಬ್ಬರು’ ಎಂದಿದ್ದಾರೆ. ಇನ್ನು, ಮೊಹಮ್ಮದ್‌ ಕೈಫ್‌, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಇಯಾನ್ ಬಿಷಪ್, ಕೆವಿನ್ ಪೀಟರ್ಸನ್, ಮೈಕೆಲ್ ವಾನ್‌ ಸೇರಿ ಹಲವರು ವೈಭವ್‌ರನ್ನು ಕೊಂಡಾಡಿದ್ದಾರೆ.