ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ನಡುವೆ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದ್ದು, ಶುಭಮನ್ ಗಿಲ್ ಬದಲಿಗೆ ಹಾರ್ದಿಕ್ ಪಾಂಡ್ಯರನ್ನು ಉಪನಾಯಕರನ್ನಾಗಿ ಹೆಸರಿಸಿದ್ದಾರೆ.
ದೆಹಲಿ: ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಾಳೆ ಪ್ರಕಟಿಸುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ನಂತರ ವಿಶ್ವಕಪ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಗೆ ತಂಡವನ್ನು ಪ್ರಕಟಿಸಲಾಗುವುದು.
ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆಯುತ್ತಾರೆ ಎಂಬ ಚರ್ಚೆ ಅಭಿಮಾನಿಗಳಲ್ಲಿ ಜೋರಾಗಿದೆ. ಈ ನಡುವೆ, ಮಾಜಿ ಆಟಗಾರ ಆಕಾಶ್ ಚೋಪ್ರಾ ಟಿ20 ವಿಶ್ವಕಪ್‌ಗೆ ತಮ್ಮ ಭಾರತೀಯ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭಮನ್ ಗಿಲ್ ಉಪನಾಯಕರಾಗಿ ಮುಂದುವರಿಯುವುದು ಅನುಮಾನ ಎಂದು ಹೇಳಿರುವ ಆಕಾಶ್ ಚೋಪ್ರಾ, ಹಾರ್ದಿಕ್ ಪಾಂಡ್ಯರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಿರುವುದು ಗಮನಾರ್ಹ. ಟಿ20 ತಂಡಕ್ಕೆ ಮರಳಿದ ನಂತರ ಶುಭ್‌ಮನ್ ಗಿಲ್ ಓಪನರ್ ಆಗಿ ನಿರಾಸಾದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಆರಂಭವಾಗಲಿದೆ.
ಆಕಾಶ್ ಚೋಪ್ರಾ ಆಯ್ಕೆ ಮಾಡಿದ ವಿಶ್ವಕಪ್ ತಂಡದಲ್ಲಿ ಶುಭಮನ್ ಗಿಲ್ ಅವರನ್ನು ಉಪನಾಯಕ ಸ್ಥಾನದಿಂದ ಕೈಬಿಟ್ಟರೂ, ಓಪನರ್ ಆಗಿ ಉಳಿಸಿಕೊಂಡಿದ್ದಾರೆ. ಗಿಲ್ ಮತ್ತು ಅಭಿಷೇಕ್ ಜೊತೆಗೆ, ಕೇರಳ ಮೂಲದ ಸಂಜು ಸ್ಯಾಮ್ಸನ್ ಅವರನ್ನೂ ಆಕಾಶ್ ಚೋಪ್ರಾ ಓಪನರ್ ಆಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಎರಡನೇ ವಿಕೆಟ್ ಕೀಪರ್ ಮತ್ತು ಬ್ಯಾಕಪ್ ಓಪನರ್ ಆಗಿ ತಂಡದಲ್ಲಿ ಸೇರಿಸಿಕೊಂಡಿರುವುದಾಗಿ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಸೂರ್ಯಕುಮಾರ್ ನಾಯಕರಾಗಿ ಮುಂದುವರಿದರೆ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಕೂಡ 100 ಪ್ರತಿಶತ ವಿಶ್ವಕಪ್ ತಂಡದಲ್ಲಿರುತ್ತಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಸಂಜು ಜೊತೆಗೆ ಜಿತೇಶ್ ಶರ್ಮಾ ಅವರನ್ನು ವಿಕೆಟ್ ಕೀಪರ್ ಆಗಿ ಆಕಾಶ್ ಚೋಪ್ರಾ ಆಯ್ಕೆ ಮಾಡಿದ್ದಾರೆ. ಸ್ಪಿನ್ನರ್‌ಗಳಾಗಿ ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಂಡದಲ್ಲಿದ್ದಾರೆ. ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರನ್ನು ಆಕಾಶ್ ಚೋಪ್ರಾ ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಆಕಾಶ್ ಚೋಪ್ರಾ ಆಯ್ಕೆ ಮಾಡಿದ ಭಾರತದ ಟಿ20 ವಿಶ್ವಕಪ್ ತಂಡ:
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್.
ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುತ್ತಾ ಈ ತಂಡ?
ಇನ್ನು 2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


