ತಂಡದೊಳಗೆ ಏನಾಗುತ್ತಿದೆ ಎಂದು ನನಗೇನೂ ಗೊತ್ತಿಲ್ಲ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಅಚ್ಚರಿಯ ಹೇಳಿಕೆಚರ್ಚೆಗೆ ಗ್ರಾಸವಾದ ಏಯ್ಡನ್ ಮಾರ್ಕ್‌ರಮ್‌ ಹೇಳಿಕೆ

ಹೈದರಾಬಾದ್‌(ಮೇ.19): ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಯ್ಡನ್ ಮಾರ್ಕ್‌ರಮ್‌, ಗುರುವಾರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ದದ ಪಂದ್ಯದ ಟಾಸ್ ವೇಳೆ ತಂಡದೊಳಗೆ ಏನಾಗುತ್ತಿದೆ ತಿಳಿಯುತ್ತಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಸನ್‌ರೈಸರ್ಸ್‌ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್‌ ಅವರನ್ನು ಏಕೆ ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸುತ್ತಿಲ್ಲ ಎನ್ನುವ ವೀಕ್ಷಕವಿವರಣೆಗಾರನ ಪ್ರಶ್ನೆಗೆ ಉತ್ತರಿಸಿದ ಮಾರ್ಕ್‌ರಮ್, "ಉಮ್ರಾನ್ ಖಂಡಿತವಾಗಿಯೂ ಎಕ್ಸ್‌ ಫ್ಯಾಕ್ಟರ್ ಇರುವ ಆಟಗಾರ. ಆದರೆ ತೆರೆಮರೆಯಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ" ಎನ್ನುವ ಮೂಲಕ ತಂಡದ ಆಯ್ಕೆಯಲ್ಲಿ ತಮ್ಮ ಪಾತ್ರ ಅಷ್ಟಕ್ಕಷ್ಟೇ ಎನ್ನುವ ಸುಳಿವನ್ನು ನೀಡಿದ್ದಾರೆ. ಇನ್ನು ಕಳೆದ ಪಂದ್ಯದಲ್ಲೂ ಉಮ್ರಾನ್ ಮಲಿಕ್‌ ಅವರ ಆಯ್ಕೆಯ ಬಗ್ಗೆ ಪ್ರಶ್ನಿಸಿದಾಗ , ಆಯ್ಕೆ ಮಾಡಲು ಅವಕಾಶವಿದ್ದರೆ ಖಂಡಿತ ಮಾಡುತ್ತಿದ್ದೆ ಎಂದು ಏಯ್ಡನ್ ಮಾರ್ಕ್‌ರಮ್ ಅಚ್ಚರಿಯ ಹೇಳಿಕೆ ನೀಡಿದ್ದರು.

ಐಪಿಎಲ್‌ ಕೋಚಿಂಗ್‌ ಹಿಡಿತಕ್ಕೆ ಸಿಕ್ಕಿಲ್ಳ: ಲಾರಾ!

ಅಹಮದಾಬಾದ್‌: ದಿಗ್ಗಜ ಕ್ರಿಕೆಟಿಗ, ಇದೇ ಮೊದಲ ಬಾರಿಗೆ ಐಪಿಎಲ್‌ ತಂಡದ ಪ್ರಧಾನ ಕೋಚ್‌ ಆಗಿರುವ ಬ್ರಿಯಾನ್‌ ಲಾರಾ ತಮಗಿನ್ನೂ ಐಪಿಎಲ್‌ ತಂಡದ ಕೋಚಿಂಗ್‌ ಹಿಡಿತಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದು, ಅಚ್ಚರಿಗೆ ಕಾರಣವಾಗಿದೆ. ಸೋಮವಾರ ಗುಜರಾತ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ಸೋತು ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸನ್‌ರೈಸರ್ಸ್‌ನ ಕೋಚ್‌ ಲಾರಾ, ‘ಅಧಿಕ ಪ್ರಯಾಣ, ವಿವಿಧ ರೀತಿಯ ಪಿಚ್‌ಗಳಿಗೆ ಬೇಕಿರುವ ಬದಲಾವಣೆ ಮಾಡಲು ಕಷ್ಟವಾಗುತ್ತಿದೆ. ಐಪಿಎಲ್‌ನಂತಹ ದೊಡ್ಡ ಟೂರ್ನಿಯಲ್ಲಿ ಭಾವನಾತ್ಮಕ ಒತ್ತಡವೂ ಇರಲಿದೆ’ ಎಂದಿದ್ದಾರೆ.

ಸನ್‌ರೈಸರ್ಸ್ ಎದುರು ಗೆದ್ದು ಬೀಗಿದ ಆರ್‌ಸಿಬಿ

ಹೈದರಾಬಾದ್‌: 2023ರ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ ಪಂದ್ಯದಿಂದ ಪಂದ್ಯಕ್ಕೆ ರೋಚಕಗೊಳ್ಳುತ್ತಿದ್ದು, ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಪ್ಲೇ-ಆಫ್‌ಗೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ‘ಚೇಸ್‌ ಮಾಸ್ಟರ್‌’ ವಿರಾಟ್‌ ಕೊಹ್ಲಿ ಹಾಗೂ ನಾಯಕ ಫಾಫ್‌ ಡು ಪ್ಲೆಸಿಸ್ ಅವರ ದಾಖಲೆಯ 172 ರನ್‌ ಜೊತೆಯಾಟ, ಸನ್‌ರೈಸ​ರ್ಸ್‌ ನೀಡಿದ್ದ 187 ರನ್‌ ಗುರಿಯನ್ನು ಆರ್‌ಸಿಬಿ ನಿರಾಯಾಸವಾಗಿ ಇನ್ನೂ 4 ಎಸೆತ ಬಾಕಿ ಇರುವಂತೆ ಬೆನ್ನತ್ತಲು ನೆರವಾಯಿತು.

IPL 2023: ಕೊಹ್ಲಿ ಕಿಂಗ್‌ ಸೆಂಚುರಿ, ಆರ್‌ಸಿಬಿಗೆ ಬಿಗ್‌ ವಿಕ್ಟರಿ, ಪ್ಲೇ ಆಫ್‌ ರೇಸ್‌ನ ತಂಡಗಳಿಗೆ ಎದೆಯುರಿ!

ಸ್ಫೋಟಕ ಆರಂಭ: ಕೊಹ್ಲಿ ಹಾಗೂ ಡು ಪ್ಲೆಸಿಸ್ ಮೊದಲ ಎಸೆತದಿಂದಲೇ ಸನ್‌ರೈಸ​ರ್ಸ್‌ ಬೌಲರ್‌ಗಳನ್ನು ಚೆಂಡಾಡಿದರು. ಪವರ್‌-ಪ್ಲೇನಲ್ಲಿ 64 ರನ್‌ ಸಿಡಿಸಿದ ಈ ಜೋಡಿ 10 ಓವರ್‌ಗೆ 95 ರನ್‌ ಕಲೆಹಾಕಿತು. ಡು ಪ್ಲೆಸಿಸ್‌ಗೆ ಆರಂಭದಲ್ಲೇ 2 ಜೀವದಾನ ದೊರೆಯಿತು. 9ನೇ ಓವರ್‌ನ 5ನೇ ಎಸೆತದಲ್ಲಿ ಡು ಪ್ಲೆಸಿಸ್ ಮಿಡ್‌ ವಿಕೆಟ್‌ ಫೀಲ್ಡರ್‌ಗೆ ಕ್ಯಾಚಿತು ಔಟಾಗಿದ್ದರು. ಆದರೆ ಆ ಎಸೆತವನ್ನು ವಿವಾದಾತ್ಮಕ ರೀತಿಯಲ್ಲಿ ನೋಬಾಲ್‌ ಎಂದು ಘೋಷಿಸಲಾಯಿತು. ಇದರ ಲಾಭವೆತ್ತಿದ ಆರ್‌ಸಿಬಿ ನಾಯಕ ಈ ಆವೃತ್ತಿಯಲ್ಲಿ 8ನೇ ಅರ್ಧಶತಕ ಪೂರೈಸಿ, 700 ರನ್‌ ಗಡಿ ದಾಟಿದರು.

ಕೊಹ್ಲಿ ಯಾವ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳದೆ 62 ಎಸೆತದಲ್ಲಿ ಶತಕ ಪೂರೈಸಿದರು. 63 ಎಸೆತದಲ್ಲಿ 12 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಔಟಾದರು. ಡು ಪ್ಲೆಸಿ 47 ಎಸೆತದಲ್ಲಿ 71 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಮ್ಯಾಕ್ಸ್‌ವೆಲ್‌, ಬ್ರೇಸ್‌ವೆಲ್‌ ತಂಡವನ್ನು ಜಯದ ದಡ ದಾಟಿಸಿದರು.

ಕ್ಲಾಸೆನ್‌ ಶತಕ: ಸನ್‌ರೈಸ​ರ್ಸ್‌ ಪರ ಕ್ಲಾಸೆನ್‌ 51 ಎಸೆತದಲ್ಲಿ 104 ರನ್‌ ಸಿಡಿಸಿದರು. ಸ್ಪಿನ್ನರ್‌ಗಳನ್ನು ಚೆಂಡಾಡಿದ ಹೆನ್ರಿಚ್ ಕ್ಲಾಸೆನ್‌ 29 ಎಸೆತದಲ್ಲಿ 70 ರನ್‌ ಚಚ್ಚಿದರು. ಸನ್‌ರೈಸ​ರ್ಸ್‌ನ ಉಳಿದ ಬ್ಯಾಟರ್‌ಗಳು ಒಟ್ಟು 69 ಎಸೆತ ಎದುರಿಸಿ ಕೇವಲ 76 ರನ್‌ ಗಳಿಸಿದರು.