ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ತವರಿನಲ್ಲಿ 8 ವರ್ಷಗಳ ಬಳಿಕ ಟೆಸ್ಟ್ ಶತಕದ ಬರ ನೀಗಿಸಿಕೊಂಡಿದ್ದು, ಶುಭ್‌ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಮುನ್ನಡೆ ಸಾಧಿಸಿದೆ.

ಅಹಮದಾಬಾದ್‌: ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿನ ಫಾರ್ಮ್ ಮುಂದುವರೆಸಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್, ಇದೀಗ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ತವರಿನಲ್ಲಿ ಬರೋಬ್ಬರಿ 8 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ರಾಹುಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ 3 ವಿಕೆಟ್ ಕಳೆದುಕೊಂಡು 213 ರನ್ ಸಿಡಿಸಿದ್ದು, ಒಟ್ಟಾರೆ 51 ರನ್ ಮುನ್ನಡೆ ಸಾಧಿಸಿದೆ.

8 ವರ್ಷಗಳ ಬಳಿಕ ತವರಿನಲ್ಲಿ ಮೊದಲ ಟೆಸ್ಟ್ ಶತಕ

ಕನ್ನಡಿಗ ಕೆ ಎಲ್ ರಾಹುಲ್ 8 ವರ್ಷಗಳ ಹಿಂದೆ ಅಂದರೆ 2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ತವರಿನಲ್ಲಿ ಶತಕ ಸಿಡಿಸಿದ್ದರು. ಅದೇ ಟೆಸ್ಟ್‌ನಲ್ಲಿ ಕರುಣ್ ನಾಯರ್ ತ್ರಿಶತಕ ಸಿಡಿಸಿದ್ದರು. ಇದಾದ ಬಳಿಕ ರಾಹುಲ್ ತವರಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಲು ಪದೇ ಪದೇ ವಿಫಲವಾಗುತ್ತಾ ಬಂದಿದ್ದರು. ಆದರೆ ಇದೀಗ ವಿಂಡೀಸ್ ಎದುರು ಶತಕ ಸಿಡಿಸುವ ಮೂಲಕ ತವರಿನಲ್ಲಿ ಟೆಸ್ಟ್‌ ಶತಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ಆರಂಭದಿಂದಲೂ ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಕೆ ಎಲ್ ರಾಹುಲ್ 190 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ ಮೂರಂಕಿ ಮೊತ್ತ ದಾಖಲಿಸಿದರು.

ಗಿಲ್-ರಾಹುಲ್ ಆಕರ್ಷಕ ಜತೆಯಾಟ

ಇದಕ್ಕೂ 122 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಎಚ್ಚರಿಕೆಯ ಆರಂಭ ಪಡೆಯಿತು. ಕೆ ಎಲ್ ರಾಹುಲ್ ಹಾಗೂ ಶುಭ್‌ಮನ್ ಗಿಲ್ ಜೋಡಿ ಮೂರನೇ ವಿಕೆಟ್‌ಗೆ 98 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಶುಭ್‌ಮನ್ ಗಿಲ್ 100 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 50 ರನ್ ಗಳಿಸಿ ನಾಯಕ ರೋಸ್ಟನ್ ಚೇಸ್‌ಗೆ ವಿಕೆಟ್‌ ಒಪ್ಪಿಸಿದರು.