ಫೈನಲ್ ಮುಂದೂಡಿಕೆ: 4000-5000 ರುಪಾಯಿ ಇರುವ ವಿಮಾನ ದರ 27,000ಕ್ಕೆ ಏರಿಕೆ!
ಐಪಿಎಲ್ ಫೈನಲ್ ವೀಕ್ಷಿಸಲು ಬಂದ ಕ್ರಿಕೆಟ್ ಅಭಿಮಾನಿಗಳ ಪರದಾಟ
ಫೈನಲ್ ಮೀಸಲು ದಿನಕ್ಕೆ ಮುಂದೂಡಿದ್ದರಿಂದ ವಿಮಾನ ಪ್ರಯಾಣ ದುಬಾರಿ
ನಾಲ್ಕೈದು ಸಾವಿರ ರುಪಾಯಿ ಇದ್ದ ಟಿಕೆಟ್ ದರ 20+ ಸಾವಿರಕ್ಕೇರಿಕೆ
ಅಹಮದಾಬಾದ್(ಮೇ.30): ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಸೋಮವಾರಕ್ಕೆ ಮುಂದೂಡಿಕೆಯಾಗಿದ್ದಕ್ಕೆ ಹೆಚ್ಚು ಸಮಸ್ಯೆ ಎದುರಿಸಿದ್ದು ಅಭಿಮಾನಿಗಳು. ಒಂದು ಕಡೆ ಬಿಸಿಸಿಐನ ಟಿಕೆಟ್ ಷರತ್ತು ತಲೆಬಿಸಿ ತಂದೊಡ್ಡಿದರೆ, ಸ್ಥಳೀಯ ಅಭಿಮಾನಿಗಳಿಗೆ ಮಳೆಯಲ್ಲಿ ಮನೆ ಸೇರುವುದೇ ಸವಾಲಾಯಿತು. ಇನ್ನು ಚೆನ್ನೈ ಸೇರಿ ಹಲವು ನಗರಗಳಿಂದ ಅಹಮದಾಬಾದ್‌ಗೆ ತೆರಳಿದ್ದ ಅಭಿಮಾನಿಗಳಂತೂ ತೀವ್ರ ಸಂಕಷ್ಟಕ್ಕೆ ಗುರಿಯಾದರು.
ಭಾನುವಾರ ಪಂದ್ಯ ನಡೆಯಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಮೂಲ ಟಿಕೆಟ್ ಇಟ್ಟುಕೊಂಡು ಸೋಮವಾರ ಪಂದ್ಯ ವೀಕ್ಷಿಸಬಹುದು ಎಂದಿದ್ದ ಬಿಸಿಸಿಐ, ಮೊಬೈಲ್ನಲ್ಲಿ ಟಿಕೆಟ್ ತೋರಿಸಿದರೆ ಅವಕಾಶವಿಲ್ಲ ಎಂದು ಷರತ್ತು ಹಾಕಿತ್ತು. ಆದರೆ ಭಾರೀ ಮಳೆಯಿಂದಾಗಿ ಹಲವರ ಟಿಕೆಟ್ ಸಂಪೂರ್ಣ ಒದ್ದೆಯಾಗಿ ಹರಿದು ಹೋಗಿತ್ತು. ಇನ್ನೂ ಕೆಲವರು ಗಡಿಬಿಡಿಯಲ್ಲಿ ಕ್ರೀಡಾಂಗಣದಲ್ಲೇ ಟಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ನೂರಾರು ಮಂದಿಗೆ ಫೈನಲ್ ಪಂದ್ಯ ವೀಕ್ಷಣೆಗೆ ಅವಕಾಶ ಸಿಗದೆ, ಸಾಮಾಜಿಕ ತಾಣಗಳಲ್ಲಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
4000-5000 ರುಪಾಯಿ ಇರುವ ವಿಮಾನ ದರ 27,000ಕ್ಕೆ ಏರಿಕೆ!
ಫೈನಲ್ ಪಂದ್ಯವನ್ನು ವೀಕ್ಷಿಸಲು ಚೆನ್ನೈ ಸೇರಿ ದೇಶದ ಹಲವು ಕಡೆಗಳಿಂದ ಅಹಮದಾಬಾದ್‌ಗೆ ಬಂದಿದ್ದ ಅಭಿಮಾನಿಗಳಂತೂ ಯಾತನೆ ಅನುಭವಿಸಿದರು. ಭಾರೀ ಬೇಡಿಕೆಯಿಂದಾಗಿ ಹೋಟೆಲ್ ರೂಂ ದರ ಕೈಗೆಟುಕುತ್ತಿರಲಿಲ್ಲ. ಹೀಗಾಗಿ ನೂರಾರು ಮಂದಿ ರೈಲ್ವೇ ನಿಲ್ದಾಣಗಳಲ್ಲೇ ಮಲಗಬೇಕಾಯಿತು. ಇನ್ನೂ ಹಲವರು ಕ್ರೀಡಾಂಗಣದ ಹೊರಗೆ ತಮ್ಮ ಟಿಕೆಟ್‌ಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ ದೃಶ್ಯಗಳೂ ಕಂಡು ಬಂತು. ಇದೇ ವೇಳೆ ಸಾಮಾನ್ಯವಾಗಿ ಅಹಮದಾಬಾದ್‌ನಿಂದ ಚೆನ್ನೈಗೆ 4,000-5,000 ರು. ಇರುವ ವಿಮಾನ ಟಿಕೆಟ್ ದರ ಏಕಾಏಕಿ 27,000 ರು.ವರೆಗೂ ಏರಿಕೆಯಾಯಿತು. ಇದರಿಂದ ಜನ ಕಂಗಾಲಾದರು.
ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಧೋನಿಯಂತೆ ಬದುಕೋಣ!
ನಿರಾಸೆ ಮಾಡದ ಧೋನಿ ಬಳಗ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸಾವಿರಾರ ಕಿಲೋ ಮೀಟರ್ ದೂರದಿಂದ ಕ್ರಿಕೆಟ್ ಅಭಿಮಾನಿಗಳು ನರೇಂದ್ರ ಮೋದಿ ಸ್ಟೇಡಿಯಂಗೆ ಧಾವಿಸಿದ್ದರು. ಬಹುತೇಕ ಇದು ಮಹೇಂದ್ರ ಸಿಂಗ್ ಧೋನಿ ಆಡಲಿರುವ ಕೊನೆಯ ಐಪಿಎಲ್ ಫೈನಲ್ ಎಂಬಂತೆ ಬಿಂಬಿತವಾಗಿತ್ತು. ಹೀಗಾಗಿ ಧೋನಿಯನ್ನು ಕೊನೆಯ ಬಾರಿಗೆ ಮೈದಾನದಲ್ಲಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಹಮದಾಬಾದ್‌ಗೆ ಬಂದಿದ್ದರು.
ಇನ್ನು ಮೀಸಲು ದಿನವಾದ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 214 ರನ್ ಬಾರಿಸಿತ್ತು. ಚೆನ್ನೈ ಮೂಲದ ಸಾಯಿ ಸುದರ್ಶನ್, ಗುಜರಾತ್ ಟೈಟಾನ್ಸ್ ಪರ 47 ಎಸೆತಗಳಲ್ಲಿ 96 ರನ್ ಸಿಡಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ 39 ಎಸೆತಗಳಲ್ಲಿ 54 ರನ್ ಚಚ್ಚಿದರು.
ಕೊನೆವರೆಗೂ ರೋಚಕತೆ ಕಾಯ್ದುಕೊಂಡ 16ನೇ ಆವೃತ್ತಿ ಐಪಿಎಲ್ಗೆ ತೆರೆ!
ಇನ್ನು ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 3 ಎಸೆತ ಎದುರಿಸುತ್ತಿದ್ದಂತೆಯೇ ಮತ್ತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದಾದ ಬಳಿಕ ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಚೆನ್ನೈ ಸೂಪರ್ ಕಿಂಗ್ಸ್‌ಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಯಿತು. ಚೆನ್ನೈ ಪರ ಡೆವೊನ್ ಕಾನ್‌ವೇ(47), ಶಿವಂ ದುಬೆ(32*) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿದ್ದಾಗ ರವೀಂದ್ರ ಜಡೇಜಾ ಒಂದು ಸಿಕ್ಸ್ ಹಾಗೂ ಒಂದು ಬೌಂಡರಿ ಚಚ್ಚಿ ತಂಡವನ್ನ ರೋಚಕವಾಗಿ ಗೆಲುವಿನ ದಡ ಸೇರಿಸುವ ಮೂಲಕ ಅಭಿಮಾನಿಗಳಿಗೆ ಪೈಸಾ ವಸೂಲ್ ಪ್ರದರ್ಶನ ನೀಡಿದರು.
ಮನೆ ತಲುಪಲು ಪರದಾಟ
ಪಂದ್ಯ ಮುಂದೂಡಿಕೆಯಾದ ಬಳಿಕ ಮನೆಗೆ ತೆರಳಲೂ ಸ್ಥಳೀಯ ಅಭಿಮಾನಿಗಳು ಪರದಾಡಿದರು. ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ನಿಂತಿದ್ದ ಕಾರಣ ಬಸ್, ಟ್ಯಾಕ್ಸಿ, ಅಟೋ ಸಂಚಾರ ವ್ಯತ್ಯಯಗೊಂಡಿತ್ತು. ಮೆಟ್ರೋ ರೈಲು ನಿಲ್ದಾಣದೊಳಕ್ಕೇ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೀಗಾಗಿ ಅನಿವಾರ್ಯವಾಗಿ ಮಳೆ ನೀರಿನಲ್ಲೇ ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡೇ ಹೋಗಬೇಕಾಯಿತು.