ಕೊನೆವರೆಗೂ ರೋಚಕತೆ ಕಾಯ್ದುಕೊಂಡ 16ನೇ ಆವೃತ್ತಿ ಐಪಿಎಲ್ಗೆ ತೆರೆ!
ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಾಕ್ಷಿಯಾದ ಟೂರ್ನಿ
ಪ್ರತಿ ಪಂದ್ಯವೂ ಒಂದಕ್ಕಿಂತ ಒಂದು ರೋಚಕ
ಹಲವು ನೂತನ ದಾಖಲೆಗಳು ನಿರ್ಮಾಣ
ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ
ಅಹಮದಾಬಾದ್(ಮೇ.30): ಎರಡು ತಿಂಗಳ ಕಾಲ ಭಾರತ ಹಾಗೂ ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಸೋಮವಾರ ತೆರೆ ಬಿದ್ದಿದೆ. ಭಾನುವಾರ ಬಿಡದೆ ಮಳೆ ಸುರಿದ ಕಾರಣ, ಫೈನಲ್ ಪಂದ್ಯವನ್ನು ಮೀಸಲು ದಿನವಾಗಿದ್ದ ಸೋಮವಾರಕ್ಕೆ ಮುಂದೂಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಬಾಕಿ ಇದ್ದ ಸಂಗೀತ ಕಾರ‍್ಯಕ್ರಮಗಳು ಸೋಮವಾರ ಪ್ರದರ್ಶನಗೊಂಡವು.
ಮಾ.31ರಂದು ಇದೇ ಕ್ರೀಡಾಂಗಣದಲ್ಲಿ ಚೆನ್ನೈ ಹಾಗೂ ಗುಜರಾತ್ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ದೊರೆತಿತ್ತು. ಫೈನಲ್‌ನಲ್ಲೂ ಈ ಎರಡು ತಂಡಗಳೇ ಎದುರಾಗಿದ್ದು ವಿಶೇಷ. ಕ್ರೀಡಾಂಗಣಗಳಿಗೆ ಮತ್ತೆ ಪ್ರೇಕ್ಷಕರ ಆಗಮನ, ಹಲವು ಹೊಸ ನಿಯಮ, ನವ ತಾರೆಗಳ ಉದಯದೊಂದಿಗೆ ಈ ಬಾರಿ ಪ್ರೇಕ್ಷಕರಿಗೆ ಹಲವು ರೋಚಕ ಕ್ಷಣಗಳನ್ನು ಕಟ್ಟಿಕೊಟ್ಟಿತು.
ಟೂರ್ನಿಯುದ್ದಕ್ಕೂ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕೊರತೆಯಿರಲಿಲ್ಲ. ಈ ಬಾರಿ ಐಪಿಎಲ್ನಲ್ಲಿ ರನ್ ಮಳೆಯೇ ಸುರಿಯಿತು. 2100ಕ್ಕೂ ಅಧಿಕ ಬೌಂಡರಿ, 1100ಕ್ಕೂ ಅಧಿಕ ಸಿಕ್ಸರ್‌ಗಳು, ದಾಖಲೆಯ 12 ಶತಕಗಳು, ಅತಿಹೆಚ್ಚು ವಿಕೆಟ್‌ಗಳು ಹೀಗೆ ಎಲ್ಲಾ ವಿಭಾಗಗಳಲ್ಲೂ ಈ ಆವೃತ್ತಿ ದಾಖಲೆಗಳಿಗೆ ಸಾಕ್ಷಿಯಾಯಿತು.
CSK Champion: ಗುಜರಾತ್ ಮಣಿಸಿದ ಧೋನಿ ಸೇನೆ ಐಪಿಎಲ್ ಚಾಂಪಿಯನ್
ವಿವಾದಗಳಿಲ್ಲದೇ ಮುಗಿದ ಟೂರ್ನಿ
ಕೋವಿಡ್ ಬಳಿಕ ಮತ್ತೆ ಎಂದಿನ ಶೈಲಿಗೆ ಮರಳಿದ್ದ ಐಪಿಎಲ್ ಯಾವುದೇ ದೊಡ್ಡ ಮಟ್ಟಿನ ವಿವಾದಗಳಿಲ್ಲದೇ ಕೊನೆಗೊಂಡಿತು. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್, ಹೃತಿಕ್ ಶೋಕೀನ್-ನಿತೀಶ್ ರಾಣಾ ಸೇರಿ ಕೆಲ ಆಟಗಾರರ ನಡುವೆ ಸಣ್ಣ-ಪುಟ್ಟಮಾತಿನ ಚಕಮಕಿ ಹೊರತುಪಡಿಸಿ ಯಾವುದೇ ದೊಡ್ಡ ವಿವಾದ ಈ ಬಾರಿ ಕಂಡುಬರಲಿಲ್ಲ.
3 ವರ್ಷಗಳ ಬಳಿಕ ಮತ್ತೆ ಪ್ರೇಕ್ಷಕರಿಗೆ ಹಬ್ಬ!
ಕೋವಿಡ್ನಿಂದಾಗಿ 3 ವರ್ಷಗಳ ಕಾಲ ಅಭಿಮಾನಿಗಳಿಗೆ ಐಪಿಎಲ್ನಲ್ಲಿ ಕ್ರೀಡಾಂಗಣಕ್ಕೆ ಅವಕಾಶವಿರಲಿಲ್ಲ. 2019ರ ಬಳಿಕ ಮತ್ತೆ ಈ ಬಾರಿ ಐಪಿಎಲ್ ತನ್ನ ಹಳೆಯ ಮಾದರಿಗೆ ವಾಪಸಾಗಿದ್ದು, ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿ ನೇರವಾಗಿ ಪಂದ್ಯ ವೀಕ್ಷಿಸಿ, ಕುಣಿದು ಕುಪ್ಪಳಿಸಿದರು. ಬೆಂಗಳೂರಿನ ಚಿನ್ನಸ್ವಾಮಿ ಸೇರಿದಂತೆ ಹಲವು ಕ್ರೀಡಾಂಗಣಗಳಲ್ಲಿ ಟಿಕೆಟ್ಗಾಗಿ ನೂಕುನುಗ್ಗಲು ಕೂಡಾ ಉಂಟಾಗಿತ್ತು.
ದಾಖಲೆಯ ಟೀವಿ, ಡಿಜಿಟಲ್ ವೀಕ್ಷಣೆ!
ಈ ಬಾರಿ ಐಪಿಎಲ್ ಮೈದಾನದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸುವುದರ ಜೊತೆಗೆ ಟೀವಿ, ಡಿಜಿಟಲ್ ವೀಕ್ಷಣೆಯಲ್ಲೂ ದಾಖಲೆ ಬರೆಯಿತು. ಐಪಿಎಲ್ ಪಂದ್ಯಗಳ ಟೀವಿ ಪ್ರಸಾರ ಹಕ್ಕನ್ನು ಬರೋಬ್ಬರಿ 23,575 ಕೋಟಿ ರು.ಗೆ ತನ್ನದಾಗಿಸಿಕೊಂಡಿದ್ದ ಸ್ಟಾರ್ ಸ್ಪೋರ್ಟ್ಸ್, ಈ ಬಾರಿಯ ಟೂರ್ನಿ ಈವರೆಗಿನ ಗರಿಷ್ಠ ವೀಕ್ಷಣೆಯ ದಾಖಲೆ ಬರೆದಿದ್ದಾಗಿ ಮಾಹಿತಿ ನೀಡಿದೆ.
ಟೂರ್ನಿಯ ಮೊದಲ 66 ಪಂದ್ಯಗಳನ್ನು 482 ಮಿಲಿಯನ್(48.2 ಕೋಟಿ) ಮಂದಿ ವೀಕ್ಷಿಸಿದ್ದಾರೆ. 2019ರಲ್ಲಿ ಒಟ್ಟು 478 ಮಿಲಿಯನ್ ಜನರು ಟೀವಿಯಲ್ಲಿ ಪಂದ್ಯ ವೀಕ್ಷಿಸಿದ್ದರು ಎಂದು ಸ್ಟಾರ್ ಸ್ಪೋಟ್ಸ್‌ರ್ ತಿಳಿಸಿದೆ. ಇನ್ನು, ಡಿಜಿಟಲ್ನಲ್ಲಿ ಚೆನ್ನೈ-ಗುಜರಾತ್ ನಡುವಿನ ಕ್ವಾಲಿಫೈಯರ್ ಪಂದ್ಯದ ವೇಳೆ ಏಕಕಾಲಕ್ಕೆ 2.5 ಕೋಟಿ ಮಂದಿ ಪಂದ್ಯ ವೀಕ್ಷಿಸಿದ್ದು, ಹೊಸ ದಾಖಲೆ. ಈ ಬಾರಿ ಹಲವು ಪಂದ್ಯಗಳನ್ನು ಏಕಕಾಲಕ್ಕೆ 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು ವಿಶೇಷ.