ಬಾಂಗ್ಲಾದೇಶ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ. ಹಿಂದಿನ ಮಧ್ಯಂತರ ಸರ್ಕಾರವು ಮುಸ್ತಾಫಿಜುರ್ ರಹಮಾನ್ ವಿವಾದದ ನಂತರ ಹೇರಿದ್ದ ನಿಷೇಧವನ್ನು, ಹೊಸ ಸರ್ಕಾರವು 'ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸುವುದಿಲ್ಲ' ಎಂದು ಹೇಳಿ ಹಿಂಪಡೆದಿದೆ.  

ಢಾಕಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರದ ಮೇಲಿದ್ದ ನಿರ್ಬಂಧಗಳನ್ನು ಬಾಂಗ್ಲಾದೇಶ ಸರ್ಕಾರ ತೆಗೆದುಹಾಕಿದೆ. ಈ ಮೂಲಕ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಐಪಿಎಲ್ ಕ್ರೇಜ್‌ಗೆ ಕಂಗಾಲಾಗಿರುವ ಬಾಂಗ್ಲಾದೇಶ, ಇದೀಗ ಐಪಿಎಲ್ ಪ್ರಸಾರಕ್ಕೆ ಹೇರಿದ್ದ ನಿಷೇಧವನ್ನು ಹಿಂಪಡೆದುಕೊಂಡಿದೆ.

'ನಾವು ಕ್ರೀಡೆಯನ್ನು ರಾಜಕೀಯದ ಜೊತೆ ಬೆರೆಸಲು ಇಷ್ಟಪಡುವುದಿಲ್ಲ. ಇದನ್ನು ಕೇವಲ ವಾಣಿಜ್ಯ ದೃಷ್ಟಿಕೋನದಿಂದ ನೋಡುತ್ತೇವೆ' ಎಂದು ಹೊಸದಾಗಿ ಅಧಿಕಾರ ವಹಿಸಿಕೊಂಡ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಹೀರ್ ಉದ್ದೀನ್ ಸ್ವಪನ್ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಮಧ್ಯಂತರ ಸರ್ಕಾರ ಹೇರಿದ್ದ ನಿಷೇಧ ತೆರವಾದ ಕಾರಣ, ಇನ್ಮುಂದೆ ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳನ್ನು ಲೈವ್ ಆಗಿ ನೋಡಬಹುದು.

'ಐಪಿಎಲ್ ಪ್ರಸಾರ ಮಾಡಲು ಸದ್ಯಕ್ಕೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಆದರೆ, ಯಾವುದೇ ಚಾನೆಲ್ ವಾಣಿಜ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅನುಮತಿ ಕೇಳಿದರೆ, ನಾವು ಅದನ್ನು ಖಂಡಿತವಾಗಿಯೂ ಪರಿಗಣಿಸುತ್ತೇವೆ' ಎಂದು ಅವರು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಸೇರಿದಂತೆ ಅಂತರಾಷ್ಟ್ರೀಯ ಕ್ರೀಡಾ ವಾಹಿನಿಗಳಿಗೆ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ಮಾಡಲು ಯಾವುದೇ ಅಡ್ಡಿ ಇರುವುದಿಲ್ಲ. 'ನಾವು ಯಾರನ್ನೂ ಒತ್ತಾಯಿಸುವುದಿಲ್ಲ, ಆದರೆ ಆಸಕ್ತಿ ಇರುವವರಿಗೆ ಅನುಮತಿ ನೀಡುತ್ತೇವೆ' ಎನ್ನುವುದು ಸರ್ಕಾರದ ಸ್ಪಷ್ಟ ನೀತಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಬಲ್ ಆಪರೇಟರ್‌ಗಳ ಪ್ರತಿಕ್ರಿಯೆ ಏನು?

ಸರ್ಕಾರದ ಈ ಹೊಸ ನಿರ್ಧಾರವನ್ನು 'ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಬಾಂಗ್ಲಾದೇಶ್' ಸ್ವಾಗತಿಸಿದೆ. 'ಈಗ ಯಾವುದೇ ಅಧಿಕೃತ ನಿಷೇಧದ ಆದೇಶಗಳಿಲ್ಲ. ಹೀಗಾಗಿ ನಾವು ಐಪಿಎಲ್ ಫೀಡ್ ಅನ್ನು ತಡೆಯುವುದಿಲ್ಲ' ಎಂದು ಅಸೋಸಿಯೇಷನ್ ತಿಳಿಸಿದೆ. ಮೊಹಮ್ಮದ್ ಯೂನುಸ್ ನೇತೃತ್ವದ ಹಿಂದಿನ ಮಧ್ಯಂತರ ಸರ್ಕಾರ ಹೊರಡಿಸಿದ್ದ ನಿರ್ದೇಶನಗಳಿಗೆ ಈಗ ಯಾವುದೇ ಮಾನ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಸರ್ಕಾರ ಐಪಿಎಲ್ ನಿಷೇಧಿಸಲು ಒಂದು ಬಲವಾದ ಕಾರಣವಿತ್ತು. ಬಾಂಗ್ಲಾದೇಶದಲ್ಲಿ ನಡೆದಿದ್ದ ಆಂತರಿಕ ಗಲಭೆಗಳು ಮತ್ತು ಹಿಂದೂಗಳ ಮೇಲಿನ ದಾಳಿಯ ನಂತರ, ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರೊಂದಿಗಿನ ಒಪ್ಪಂದವನ್ನು ರದ್ದುಗೊಳಿಸುವಂತೆ ಬಿಸಿಸಿಐ, ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೂಚಿಸಿತ್ತು. ಇದರಿಂದ ಕೆರಳಿದ್ದ ಬಾಂಗ್ಲಾದೇಶದ ಹಿಂದಿನ ಮಧ್ಯಂತರ ಸರ್ಕಾರ, ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು. ಆದರೆ, ಈಗಿನ ಸರ್ಕಾರ ಈ ಕಠಿಣ ನಿಲುವಿನಿಂದ ಹಿಂದೆ ಸರಿದಿದೆ. ಹೀಗಾಗಿ, ಐಪಿಎಲ್ 2026ರ ಸೀಸನ್ ಪಂದ್ಯಗಳನ್ನು ಬಾಂಗ್ಲಾದೇಶದ ಜನರೂ ಲೈವ್ ಆಗಿ ನೋಡಬಹುದಾಗಿದೆ.

ಇಂದಿನಿಂದ 19ನೇ ಆವೃತ್ತಿಯ ಐಪಿಎಲ್ ಆರಂಭ!

19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈಗಾಗಲೇ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದ್ದು, ಫೈನಲ್ ಪಂದ್ಯವು ಮೇ 31ರಂದು ನಡೆಯಲಿದೆ.