ದೆಹಲಿ(ಮಾ.14): ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆದಿತ್ಯ ತಾರೆ ಬಾರಿಸಿದ ಅಜೇಯ ಶತಕ(118)ದ ನೆರವಿನಿಂದ 2020-21ನೇ ಸಾಲಿನ ವಿಜಯ್‌ ಹಜಾರೆ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವನ್ನು 6 ವಿಕೆಟ್‌ ಗಳಿಂದ ಮಣಿಸಿ ಮುಂಬೈ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಮುಂಬೈ 4ನೇ ಬಾರಿಗೆ ವಿಜಯ್‌ ಹಜಾರೆ ಟ್ರೋಫಿಗೆ ಮುತ್ತಿಕ್ಕಿದೆ.

ಹೌದು, ಉತ್ತರ ಪ್ರದೇಶ ನೀಡಿದ್ದ 313 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಪೃಥ್ವಿ ಶಾ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 89 ರನ್‌ಗಳ ಜತೆಯಾಟವಾಡಿತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಪೃಥ್ವಿ ಕೇವಲ 39 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಸ್ಫೋಟಕ 73 ರನ್‌ ಚಚ್ಚಿದರು. ಇದರೊಂದಿಗೆ ವಿಜಯ್‌ ಹಜಾರೆ ಟೂರ್ನಿಯ ಇತಿಹಾಸದಲ್ಲಿ 800 ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಅಪರೂಪದ ದಾಖಲೆಗೆ ಪೃಥ್ವಿ ಭಾಜನರಾಗಿದ್ದಾರೆ. ಪೃಥ್ವಿ 8 ಪಂದ್ಯಗಳಲ್ಲಿ 1 ದ್ವಿಶತಕ ಸೇರಿ 4 ಶತಕ ಹಾಗೂ ಒಂದು ಅರ್ಧಶತಕ ಸಹಿತ 827 ರನ್‌ ಬಾರಿಸುವ ಮೂಲಕ ಮುಂಬೈ ಯಶಸ್ವಿಗೆ ಬಹುಪಾಲು ಕಾಣಿಕೆ ನೀಡಿದ್ದಾರೆ.

ವಿಜಯ್‌ ಹಜಾರೆ ಟ್ರೋಫಿ ಗೆಲ್ಲಲು ಮುಂಬೈಗೆ 313 ರನ್‌ಗಳ ಕಠಿಣ ಗುರಿ

ಇನ್ನು ಫೈನಲ್‌ ಪಂದ್ಯದಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಆದಿತ್ಯ ತಾರೆ ಕೇವಲ 107 ಎಸೆತಗಳಲ್ಲಿ 118 ರನ್‌ ಬಾರಿಸುವ ಮೂಲಕ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂದಹಾಗೆ ಇದು 'ಲಿಸ್ಟ್‌ ಎ' ಕ್ರಿಕೆಟ್‌ನಲ್ಲಿ ತಾರೆ ಬಾರಿಸಿದ ಮೊದಲ ಶತಕ ಕೂಡಾ ಹೌದು. ಆದಿತ್ಯ ತಾರೆಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಕೇವಲ 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್‌ ಬಾರಿಸುವ ಮೂಲಕ ಮುಂಬೈ ಗೆಲುವನ್ನು ಮತ್ತಷ್ಟು ಸುಲಭವಾಗಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಉತ್ತರ ಪ್ರದೇಶ ತನ್ನ ಆರಂಭಿಕ ಬ್ಯಾಟ್ಸ್‌ಮನ್ ಮಾಧವ್ ಕೌಶಿಕ್‌ ಬಾರಿಸಿದ ಅಜೇಯ ಶತಕ(158) ಹಾಗೂ ಸಮರ್ಥ್‌ ಸಿಂಗ್‌ ಮತ್ತು ಅಕ್ಷ್‌ದೀಪ್‌ ನಾಥ್‌ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 312 ರನ್‌ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್

ಉತ್ತರ ಪ್ರದೇಶ: 312/4
ಮಾಧವ್ ಕೌಶಿಕ್‌: 158*
ತನುಶ್‌ ಕೊಟ್ಯಾನ್‌: 54/2

ಮುಂಬೈ: 315/4
ಆದಿತ್ಯ ತಾರೆ: 118*
ಸಮೀರ್ ಚೌಧರಿ: 43/1