ಕೇಪ್‌ಟೌನ್(ನ.21): ದಕ್ಷಿಣ ಆಫ್ರಿಕಾ ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್‌ ಆಧುನಿಕ ಕ್ರಿಕೆಟ್‌ನ ವಿಸ್ಫೋಟಕ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡಿದ್ದಾರೆ. ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡುವುದೇ ಒಂದು ರೀತಿ ಕಣ್ಣಿಗೆ ಹಬ್ಬ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲೂ ಎಬಿ ಡಿವಿಲಿಯರ್ಸ್ ಆಕರ್ಷಕ ಬ್ಯಾಟಿಂಗ್‌ ನಡೆಸಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದರು.

ಎಬಿಡಿ ಈ ಪ್ರದರ್ಶನ ಕಂಡು ಅವರ ಅಭಿಮಾನಿಗಳು ಆದಷ್ಟು ಬೇಗ ಎಬಿಡಿ ನಿವೃತ್ತಿ ಹಿಂಪಡೆದು ಹರಿಣಗಳ ತಂಡ ಕೂಡಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್‌ ಬೌಷರ್‌ ನೀಡಿದ ಒಂದು ಹೇಳಿಕೆ ಎಬಿಡಿ ಸದ್ಯದಲ್ಲಿ ರಾಷ್ಟ್ರೀಯ ತಂಡ ಕೂಡಿಕೊಳ್ಳುವ ಸುಳಿವನ್ನು ನೀಡಿದಂತಿದೆ.

ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಆರ್‌ಸಿಬಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್..!

ಫ್ರಾಂಚೈಸಿ ಲೀಗ್‌ಗಳಲ್ಲಿ ಎಬಿ ಡಿವಿಲಿಯರ್ಸ್ ಒಳ್ಳೆಯ ಆಟವನ್ನು ಆಡಿದರೆ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳಬಹುದು ಎಂದು ಬೌಷರ್ ತಿಳಿಸಿದ್ದಾರೆ. ಕೋವಿಡ್‌ಗಿಂತ ಮೊದಲು ಎಬಿಡಿಯನ್ನು ತಂಡ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆಗಳನ್ನಾಡಿದ್ದೆವು. ಆದರೆ ಅದಾದ ಬಳಿಕ ಎಬಿಡಿ ಜತೆ ನಾವು ಚರ್ಚೆ ನಡೆಸಿಲ್ಲ. ಮುಂಬರುವ ದಿನಗಳಲ್ಲಿ ಐಪಿಎಲ್‌ನಲ್ಲಿ ತೋರಿದಂತ ಉತ್ತಮ ಪ್ರದರ್ಶನವನ್ನು ಮುಂದುವರೆಸಿದರೆ ಎಬಿಡಿ ರಾಷ್ಟ್ರೀಯ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಬೌಷರ್ ತಿಳಿಸಿದ್ದಾರೆ. 

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿ ಡಿವಿಲಿಯರ್ಸ್ 14 ಇನಿಂಗ್ಸ್‌ಗಳನ್ನಾಡಿ 45.40 ಸರಾಸರಿಯಲ್ಲಿ 5 ಅರ್ಧಶತಕ ಸಹಿತ 454 ರನ್ ಬಾರಿಸಿ ಗಮನ ಸೆಳೆದಿದ್ದರು.