ಕೇಪ್‌ಟೌನ್(ನ.20): ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ.

ಹೌದು, ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ಲೇ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೊದಲು ಎಬಿಡಿಗೆ ಅಬ್ರಹಾಂ ಡಿವಿಲಿಯರ್ಸ್ ಹಾಗೂ ಜಾನ್  ಡಿವಿಲಿಯರ್ಸ್ ಎನ್ನುವ ಗಂಡು ಮಕ್ಕಳಿದ್ದರು. ಇದೀಗ ಎಬಿಡಿ ಕುಟುಂಬ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಹೆಣ್ಣು ಮಗುವಿಗೆ ಯೆಂಟೆ ಡಿವಿಲಿಯರ್ಸ್ ಎಂದು ಹೆಸರಿಟ್ಟಿದ್ದಾರೆ.

11-11-2020ರಂದು ನಾವು ಮುದ್ದಾದ ಯೆಂಟೆ ಡಿವಿಲಿಯರ್ಸ್ ಅವರನ್ನು ಈ ಪ್ರಪಂಚಕ್ಕೆ ಸ್ವಾಗತಿಸಿದೆವು. ನಮ್ಮ ಸಂತೋಷವನ್ನು ಬಣ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಎಬಿ ಡಿವಿಲಿಯರ್ಸ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಹುಕಾಲದ ಡೇಟಿಂಗ್ ಬಳಿಕ ಎಬಿ ಡಿವಿಲಿಯರ್ಸ್ ಹಾಗೂ ಡೇನಿಯಲ್ ಮಾರ್ಚ್ 2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2015ರಲ್ಲಿ ಮೊದಲ ಮಗು ಅಬ್ರಹಂ ಡಿವಿಲಿಯರ್ಸ್ ಜನಿಸಿದರೆ, 2017ರಲ್ಲಿ ಜಾನ್ ಡಿವಿಲಿಯರ್ಸ್ ಎಬಿಡಿ ಕುಟುಂಬ ಕೂಡಿಕೊಂಡಿದ್ದರು. ಇದೀಗ ಯೆಂಟೆ ಸೇರ್ಪಡೆ ಎಬಿಡಿ ಕುಟುಂಬವನ್ನು ಮತ್ತಷ್ಟು ಖುಷಿಯಿಂದ ತೇಲುವಂತೆ ಮಾಡಿದೆ.

14ನೇ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಈ 5 ಆಟಗಾರರಿಗೆ ಗೇಟ್‌ಪಾಸ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಎಬಿ ಡಿವಿಲಿಯರ್ಸ್ 15 ಪಂದ್ಯಗಳಲ್ಲಿ 158.74ರ ಸ್ಟ್ರೈಕ್‌ರೇಟ್‌ನಲ್ಲಿ 454 ರನ್ ಬಾರಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದರು. ಇನ್ನು ಕುಟುಂಬದೊಟ್ಟಿಗೆ ಕಾಲಕಳೆಯುವ ಉದ್ದೇಶದಿಂದ 2020ನೇ ಸಾಲಿನ ಬಿಗ್‌ ಬ್ಯಾಶ್ ಟೂರ್ನಿಯಿಂದ ಎಬಿ ಡಿವಿಲಿಯರ್ಸ್ ಹಿಂದೆ ಸರಿದಿದ್ದಾರೆ.