ಅಂಡರ್-19 ಏಷ್ಯಾಕಪ್‌ನಲ್ಲಿ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ ಅವರು 51 ರನ್ ಗಳಿಸಿ ಮಿಂಚಿದ್ದು, ಮುಂಬರುವ ಐಪಿಎಲ್ 2027 ಹರಾಜಿನ ಮೇಲೆ ಕಣ್ಣಿಟ್ಟಿದ್ದಾರೆ.
ಬೆಂಗಳೂರು(ನ.13): ಐಪಿಎಲ್ 2027ರ ಮಿನಿ ಹರಾಜಿಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗಲೇ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅಂಡರ್-19 ಏಷ್ಯಾಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈಗಾಗಲೇ ಯುಎಇ ವಿರುದ್ಧ 160 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದ ಆರ್ಯವೀರ್, ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
19 ವರ್ಷದ ಆರ್ಯವೀರ್ ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ 57 ಎಸೆತಗಳನ್ನು ಎದುರಿಸಿ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು. ಈ ಮೂಲಕ ಟೂರ್ನಿಯಲ್ಲಿ ತಮ್ಮ ಎರಡನೇ ಅರ್ಧಶತಕ ದಾಖಲಿಸಿದರು. ಐಪಿಎಲ್ 2027ರ ಹರಾಜಿಗೂ ಮುನ್ನ ಆರ್ಯವೀರ್ ತೋರಿಸುತ್ತಿರುವ ಈ ಫಾರ್ಮ್ ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಮುಂಬರುವ ಹರಾಜಿನಲ್ಲಿ ಅವರ ಹೆಸರು ಕಾಣಿಸಿಕೊಂಡರೆ ಹಲವು ಫ್ರಾಂಚೈಸಿಗಳು ಬಿಡ್ ಮಾಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ.
ಅಫ್ಘಾನಿಸ್ತಾನ ವಿರುದ್ಧ 117 ರನ್‌ಗಳ ಆರಂಭಿಕ ಜೊತೆಯಾಟ
ಎಸಿಸಿ ಅಂಡರ್-19 ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ 227 ರನ್‌ಗಳಿಗೆ ಸೀಮಿತವಾಯಿತು. ಭಾರತದ ಪರ ಇಶಾನ್ ಧೀರಜ್ ಸೂದ್ ಮೂರು ವಿಕೆಟ್ ಪಡೆದು ಮಿಂಚಿದರು. ಆರ್ಯನ್ ಎರಡು ವಿಕೆಟ್ ಕಬಳಿಸಿದರೆ, ಪರೇಶ್ ಪಟೇಲ್, ಯಶವರ್ಧನ್ ಚೌಹಾಣ್ ಮತ್ತು ಅರ್ಜುನ್ ರಜಪೂತ್ ತಲಾ ಒಂದು ವಿಕೆಟ್ ಪಡೆದರು.
228 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರೈಚಂದಾನಿ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 117 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿತು. ಆರ್ಯವೀರ್ 51 ರನ್ ಗಳಿಸಿ ಔಟಾದರೆ, ಲಕ್ಷ್ಯ ರೈಚಂದಾನಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೊತೆಯಾಟದಿಂದ ಭಾರತ ತಂಡ ಗೆಲುವಿನತ್ತ ಸುಲಭವಾಗಿ ಸಾಗಿತು.
ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಅಬ್ಬರ
ಈ ಬಾರಿಯ ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನೇಪಾಳ ವಿರುದ್ಧ ಅಜೇಯ 70 ರನ್ ಗಳಿಸಿದ್ದ ಅವರು, ಯುಎಇ ವಿರುದ್ಧದ ಹಿಂದಿನ ಪಂದ್ಯದಲ್ಲಿ 160 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಇದೀಗ ಅಫ್ಘಾನಿಸ್ತಾನ ವಿರುದ್ಧ 51 ರನ್ ಗಳಿಸುವ ಮೂಲಕ ಮತ್ತೊಂದು ಅರ್ಧಶತಕ ದಾಖಲಿಸಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಗಳಿಸಿರುವ ಆರ್ಯವೀರ್, ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಆರ್ಯವೀರ್ ಸೆಹ್ವಾಗ್ ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ತಂಡ ಕೂಡಿಕೊಳ್ಳಬಹುದು ಎನ್ನುವ ಕುತೂಹಲ ಜೋರಾಗಿದೆ.
ಡಿಸೆಂಬರ್ 16ರಂದು ಗೋವಾದಲ್ಲಿ ಐಪಿಎಲ್ 2027 ಮಿನಿ ಹರಾಜು
ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಕೂಡ ತಂದೆಯಂತೆಯೇ ಆರಂಭಿಕ ಬ್ಯಾಟರ್ ಆಗಿದ್ದಾರೆ. ಯುವ ಕ್ರಿಕೆಟಿಗನಾಗಿ ಈಗಾಗಲೇ ತಮ್ಮ ಸಾಮರ್ಥ್ಯವನ್ನು ತೋರಿಸಿರುವ ಅವರು, ಭವಿಷ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ. ಅದಕ್ಕೂ ಮುನ್ನ ಐಪಿಎಲ್‌ನಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಮುಂಬರುವ ಐಪಿಎಲ್ 2027 ಟೂರ್ನಿ ಲೀಗ್‌ನ 20ನೇ ಆವೃತ್ತಿಯಾಗಿರಲಿದೆ. ಇದಕ್ಕಾಗಿ ಆಟಗಾರರ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ ಫ್ರಾಂಚೈಸಿಗಳು ತಮಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಹೊಂದಿವೆ. ಹೀಗಾಗಿ ತಂಡಗಳ ಅಗತ್ಯಕ್ಕೆ ಅನುಗುಣವಾಗಿ ಹೊಸ ಆಟಗಾರರನ್ನು ಖರೀದಿಸುವ ಪ್ರಕ್ರಿಯೆ ನಡೆಯಲಿದೆ.
ಇನ್ನು ಅಂಡರ್-19 ಏಷ್ಯಾಕಪ್‌ನ ಮತ್ತೊಂದು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಹೀಗಾಗಿ ಭಾರತ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಫೈನಲ್‌ನಲ್ಲಿ ತಂದೆಯಂತೆ ಪಾಕಿಸ್ತಾನ ಎದುರು ಆರ್ಯವೀರ್ ಸೆಹ್ವಾಗ್ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.














