ಯುಎಇ ವಿರುದ್ಧದ ಅಂಡರ್-19 ಪಂದ್ಯದಲ್ಲಿ ಆರ್ಯವೀರ್ ಸೆಹ್ವಾಗ್ 160 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ದೊಡ್ಡ ಶತಕ ಬಾರಿಸುತ್ತೇನೆ ಎಂದು ತಂದೆ ವಿರೇಂದ್ರ ಸೆಹ್ವಾಗ್ಗೆ ನೀಡಿದ್ದ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
ದುಬೈ(ನ.11): ನಿರ್ಭೀತ ಬ್ಯಾಟಿಂಗ್ ಮತ್ತು ಬೃಹತ್ ಶತಕಗಳಿಗೆ ಹೆಸರಾಗಿರುವ ಸೆಹ್ವಾಗ್ ಕುಟುಂಬದ ಕ್ರಿಕೆಟ್ ಪರಂಪರೆಯನ್ನು ಮುಂದುವರಿಸುವ ಲಕ್ಷಣಗಳನ್ನು ಯುವ ಆಟಗಾರ ಆರ್ಯವೀರ್ ಸೆಹ್ವಾಗ್ ಈಗಾಗಲೇ ತೋರಿಸುತ್ತಿದ್ದಾರೆ. ಭಾರತದ ಅಂಡರ್-19 ತಂಡದ ಬ್ಯಾಟರ್ ಆರ್ಯವೀರ್, ತಮ್ಮ ತಂದೆ ಹಾಗೂ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರಿಗೆ ದೊಡ್ಡ ಶತಕ ಬಾರಿಸುವುದಾಗಿ ಮಾತು ಕೊಟ್ಟಿದ್ದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಯುಎಇ ವಿರುದ್ಧದ ಗ್ರೂಪ್ 'ಎ' ಪಂದ್ಯದಲ್ಲಿ ಆರ್ಯವೀರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 168 ಎಸೆತಗಳಲ್ಲಿ 160 ರನ್ ಸಿಡಿಸಿದ ಅವರು, ಭಾರತ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 309 ರನ್ಗಳ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಅವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಹಾಗೂ 7 ಸಿಕ್ಸರ್ಗಳು ಸೇರಿದ್ದವು. ಈ ಅಮೋಘ ಪ್ರದರ್ಶನಕ್ಕಾಗಿ ಆರ್ಯವೀರ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಬಳಿಕ ಭಾರತ ತಂಡ ಯುಎಇಯನ್ನು 70 ರನ್ಗಳಿಂದ ಮಣಿಸಿ ಭರ್ಜರಿ ಜಯ ದಾಖಲಿಸಿತು.
ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಯುವ ಆಟಗಾರ, ಈ ಪಂದ್ಯದಲ್ಲಿ ಹೆಚ್ಚು ಸಮಯ ಕ್ರೀಸ್ನಲ್ಲಿ ಕಳೆಯಬೇಕು ಮತ್ತು ದೊಡ್ಡ ಇನ್ನಿಂಗ್ಸ್ ಕಟ್ಟಬೇಕು ಎಂಬ ಸ್ಪಷ್ಟ ಯೋಜನೆಯೊಂದಿಗೆ ಕಣಕ್ಕಿಳಿದಿದ್ದಾಗಿ ತಿಳಿಸಿದರು. ತಿರುವು ಪಡೆಯುತ್ತಿದ್ದ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಾಗಿದ್ದರೂ, ಡಾಟ್ ಬಾಲ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಾಳ್ಮೆಯಿಂದ ಆಡಿದ್ದಾಗಿ ಹೇಳಿದರು.
ತಂಡವನ್ನು ಗೆಲ್ಲಿಸಿ ಮನಬಿಚ್ಚಿ ಮಾತಾಡಿದ ಆರ್ಯವೀರ್ ಸೆಹ್ವಾಗ್
“ತುಂಬಾ ಖುಷಿಯಾಗುತ್ತಿದೆ. ಪಿಚ್ ಸ್ವಲ್ಪ ತಿರುವು ಪಡೆಯುತ್ತಿತ್ತು. ಆರಂಭದಲ್ಲೇ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಸುಮಾರು 40 ಓವರ್ಗಳವರೆಗೆ ಬ್ಯಾಟಿಂಗ್ ಮಾಡಬೇಕು ಎಂದು ನಿರ್ಧರಿಸಿದ್ದೆ. ಪಿಚ್ನಲ್ಲಿ ಕೆಲವು ಸವಾಲುಗಳಿದ್ದವು. ಆದರೆ ಡಾಟ್ ಬಾಲ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ನಂತರ ರನ್ ವೇಗ ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ನನಗಿತ್ತು. ದೊಡ್ಡ ಮೊತ್ತ ಗಳಿಸುವುದೇ ನನ್ನ ಗುರಿಯಾಗಿತ್ತು” ಎಂದು ಆರ್ಯವೀರ್ ಹೇಳಿದರು.
ಕೊಟ್ಟ ಮಾತು ಉಳಿಸಿಕೊಂಡ ಮರಿ ಸೆಹ್ವಾಗ್
ಬಳಿಕ ತಮ್ಮ ಈ ಇನ್ನಿಂಗ್ಸ್ನ ಹಿಂದಿದ್ದ ವಿಶೇಷ ಮಾತಿನ ಬಗ್ಗೆಯೂ ಅವರು ಬಹಿರಂಗಪಡಿಸಿದರು. ದೊಡ್ಡ ಶತಕ ಬಾರಿಸುವುದಾಗಿ ತಮ್ಮ ತಂದೆ ವಿರೇಂದ್ರ ಸೆಹ್ವಾಗ್ ಅವರಿಗೆ ತಾವು ಮಾತು ಕೊಟ್ಟಿದ್ದಾಗಿ ತಿಳಿಸಿದರು. “ಇಂದು ದೊಡ್ಡ ಮೊತ್ತ ಗಳಿಸುವುದಾಗಿ ನಾನು ಒಬ್ಬರಿಗೆ ಮಾತು ಕೊಟ್ಟಿದ್ದೆ. ಅದೃಷ್ಟವಶಾತ್ ಅದನ್ನು ಸಾಧಿಸಿದ್ದೇನೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ನನ್ನ ತಂದೆ (ವಿರೇಂದ್ರ ಸೆಹ್ವಾಗ್). ನಾನು ದೊಡ್ಡ ಶತಕ ಬಾರಿಸುತ್ತೇನೆ ಎಂದು ಅವರಿಗೆ ಹೇಳಿದ್ದೆ. ಏಕೆಂದರೆ ದೊಡ್ಡ ಶತಕಗಳೆಂದರೆ ಅವರಿಗೆ ತುಂಬಾ ಇಷ್ಟ. ಅವರ ಕ್ರಿಕೆಟ್ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ನನ್ನ ಮೇಲಿದೆ” ಎಂದು ಆರ್ಯವೀರ್ ಹೇಳಿದರು.
ಆರ್ಯವೀರ್-ವಿಕೆ ವಿನೀತ್ ಜೋಡಿಯಿಂದ 193 ರನ್ಗಳ ನಿರ್ಣಾಯಕ ಜೊತೆಯಾಟ
ಯುಎಇ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರ್ಯವೀರ್ ಅವರ ಇನ್ನಿಂಗ್ಸ್ ಬೆನ್ನೆಲುಬಾಯಿತು. ಆರಂಭದಲ್ಲಿ ನಾಯಕ ಲಕ್ಷ್ಯ ರಾಜೇಶ್ ರೈಚಂದಾನಿ ಅವರೊಂದಿಗೆ ಆರ್ಯವೀರ್ ಉತ್ತಮ ಜೊತೆಯಾಟ ಕಟ್ಟಿದರು. ನಾಯಕ ಲಕ್ಷ್ಯ 17 ರನ್ ಗಳಿಸಿ ಔಟಾದರು. ಆ ಬಳಿಕ ಕ್ರೀಸ್ಗೆ ಬಂದ ವಿಕೆ ವಿನೀತ್ ಪಂದ್ಯದ ಗತಿಯನ್ನೇ ಬದಲಿಸಿದರು. ಆರ್ಯವೀರ್ ಮತ್ತು ವಿನೀತ್ ಜೋಡಿ ಯುಎಇ ಬೌಲರ್ಗಳ ಮೇಲೆ ಸವಾರಿ ಮಾಡಿತು. ಎರಡನೇ ವಿಕೆಟ್ಗೆ ಈ ಜೋಡಿ ಬರೋಬ್ಬರಿ 193 ರನ್ಗಳ ನಿರ್ಣಾಯಕ ಜೊತೆಯಾಟವಾಡಿತು.
ಒಂದೆಡೆ ಆರ್ಯವೀರ್ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುತ್ತಾ, ಅಗತ್ಯವಿದ್ದಾಗ ರನ್ ವೇಗ ಹೆಚ್ಚಿಸಿದರೆ, ಮತ್ತೊಂದೆಡೆ ವಿನೀತ್ ಉತ್ತಮ ಸಾಥ್ ನೀಡಿದರು. 69 ಎಸೆತಗಳನ್ನು ಎದುರಿಸಿದ ವಿನೀತ್ 67 ರನ್ ಗಳಿಸಿದರು. ಸುಮಾರು 40 ಓವರ್ಗಳ ಕಾಲ ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದ ಆರ್ಯವೀರ್ ಅಂತಿಮವಾಗಿ 160 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್ಗಳಿದ್ದವು. ವಿನೀತ್ ಅವರ ಉಪಯುಕ್ತ ಆಟದ ನೆರವಿನಿಂದ ಭಾರತ 300 ರನ್ಗಳ ಗಡಿ ದಾಟಿತು.
ಇನ್ನಿಂಗ್ಸ್ನ ಕೊನೆಯ ಹಂತದಲ್ಲಿ ಯುಎಇ ಬೌಲರ್ಗಳು ತಿರುಗೇಟು ನೀಡಿದರು. ನಸೀಮ್ ಖಾನ್ 48 ರನ್ ನೀಡಿ 4 ವಿಕೆಟ್ ಕಬಳಿಸಿದರು. ಆದರೂ ಭಾರತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 309 ರನ್ಗಳ ಉತ್ತಮ ಮೊತ್ತ ದಾಖಲಿಸಿತು.
ಇಶಾನ್ ಸೂದ್ ದಾಳಿಗೆ ಯುಎಇ ತತ್ತರ; ಭಾರತಕ್ಕೆ 70 ರನ್ಗಳ ಜಯ
310 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಯುಎಇ ತಂಡಕ್ಕೆ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸುವುದು ಸಾಧ್ಯವಾಗಲಿಲ್ಲ. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ತಂಡ ರನ್ ಗಳಿಸಲು ಪರದಾಡಿತು. ಅಹ್ಮದ್ ಖುದಾದಾದ್ 74 ರನ್ ಗಳಿಸಿ ಹೋರಾಟದ ಪ್ರದರ್ಶನ ನೀಡಿದರೆ, ನೂರುಲ್ಲಾ ಅಯೋಬಿ 39 ರನ್ ಗಳಿಸಿದರು. ಆದರೆ ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಅಗತ್ಯವಾದ ದೊಡ್ಡ ಜೊತೆಯಾಟಗಳನ್ನು ಕಟ್ಟಲು ಯುಎಇಗೆ ಸಾಧ್ಯವಾಗಲಿಲ್ಲ.
ಭಾರತದ ಪರ ಇಶಾನ್ ಸೂದ್ 37 ರನ್ ನೀಡಿ 3 ವಿಕೆಟ್ ಕಬಳಿಸಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದರು. ಉಳಿದ ಬೌಲರ್ಗಳೂ ಪ್ರಮುಖ ಹಂತಗಳಲ್ಲಿ ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅಂತಿಮವಾಗಿ ಯುಎಇ ತಂಡ 50 ಓವರ್ಗಳಲ್ಲಿ 239 ರನ್ಗಳಿಗೆ ಸೀಮಿತವಾಯಿತು. ಇದರೊಂದಿಗೆ ಭಾರತ 70 ರನ್ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನ ಮೂಲಕ ಭಾರತ ಅಂಡರ್-19 ಏಷ್ಯಾ ಕಪ್ ಸೆಮಿಫೈನಲ್ ಸ್ಥಾನವನ್ನೂ ಖಚಿತಪಡಿಸಿಕೊಂಡಿದೆ. ನವೆಂಬರ್ 12ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಭಾರತ ಅಫ್ಘಾನಿಸ್ತಾನವನ್ನು ಎದುರಿಸಲಿದೆ.














